ಸಾಗರ ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳ ನಾಮಲಕವನ್ನು ಕನ್ನಡ ಭಾಷೆಯಲ್ಲಿ ಅಳಡಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಸಾಗರ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಲಕವನ್ನು ಕನ್ನಡ ಭಾಷೆಯಲ್ಲಿ ಅಳಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿ, ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಎಲ್ಲ ಅಂಗಡಿ ಮುಂಗಟ್ಟುಗಳ ನಾಮಲಕವನ್ನು ಕನ್ನಡದಲ್ಲಿಯೇ ಹಾಕಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೂ ಕೆಲವರು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿವೆ. ಇದು ಕನ್ನಡ ಭಾಷೆಗೆ ಮಾಡಿರುವ ಅವಮಾನ. ಕಡ್ಡಾಯವಾಗಿ ಕನ್ನಡ ಬಳಕೆಗೆ ರಾಜ್ಯ ಸರ್ಕಾರ ಇನ್ನಷ್ಟು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಅಧ್ಯಕ್ಷ ಮನೋಜ್ ಕುಗ್ವೆ ಒತ್ತಾಯಿಸಿದರು.
ಸಾಗರ ನಗರಸಭೆಯ ನಾಮಲಕವನ್ನು ಕನ್ನಡದಲ್ಲಿಯೇ ಹಾಕಬೇಕು. ಕೆಲವು ಬ್ಯಾಂಕ್‌ಗಳಲ್ಲಿ ಹೊರರಾಜ್ಯದ ಅಧಿಕಾರಿ, ಸಿಬ್ಬಂದಿಗಳು ಅನ್ಯಭಾಷೆ ಮಾತನಾಡುತ್ತಿದ್ದಾರೆ. ಇದರಿಂದ ಕನ್ನಡ ಭಾಷಿಕರಿಗೆ ಸಮಸ್ಯೆಯಾಗುತ್ತಿದೆ. ತಕ್ಷಣ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಪ್ರಮುಖರಾದ ಶ್ಯಾಮಲಾ ರವಿ, ರಾಘವೇಂದ್ರ, ತೀ.ನ.ಶ್ರೀನಿವಾಸ್, ಕುಂಟುಗೋಡು ಸೀತಾರಾಮ, ಅರುಣ್, ಸುಧಾಕರ ಕುಗ್ವೆ, ಗಣಪತಿ ಪಡವಗೋಡು, ಸಂದೀಪ್, ಮಹೇಶ್, ಪುನೀತ್, ಕುಶ ಕಾಗೋಡು ಇತರರಿದ್ದರು.