ಸೊರಬದಲ್ಲಿ ಆಯೋಜಿಸಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದದಲ್ಲಿ ಶ್ರೀಪಾದ ಬಿಚ್ಚುಗತ್ತಿ ಅವರನ್ನು ಸನ್ಮಾನಿಸಲಾಯಿತು. ಮಧು ಬಂಗಾರಪ್ಪ, ಡಿ.ಮಂಜುನಾಥ್, ಷಣ್ಮುಖಾಚಾರ್, ಪ್ರಜ್ವಲ್ ಚಂದ್ರಗುತ್ತಿ ಇತರರಿದ್ದರು.
- ಸಚಿವ ಮಧು ಬಂಗಾರಪ್ಪ ಅನಿಸಿಕೆ
- ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಬೆಳೆಸಿ
- ಸೊರಬದಲ್ಲಿ ನೂತನ ಭವನ ಉದ್ಘಾಟನೆ, 10ನೇ ಸಮ್ಮೇಳನ
ಸೊರಬ: ಕಲಿಯಲು ಹಲವಾರು ಭಾಷೆ ಇದ್ದರೂ ಮಾತೃಭಾಷೆ ಬಗ್ಗೆ ಅಭಿಮಾನ ಹೊಂದಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ನೂತನ ಕನ್ನಡ ಭವನ ಉದ್ಘಾಟನೆ ಹಾಗೂ ತಾಲೂಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಮಕ್ಕಳು ಹಿಂದಿ ಭಾಷೆ ಕಲಿಯಲು ಅಡ್ಡಿಪಡಿಸಿಲ್ಲ. ಮಕ್ಕಳು ಆಸಕ್ತಿಯಿಂದ ಹಿಂದಿ ಕಲಿಯಬಹುದು. ಶಿಕ್ಷಣ ಸಚಿವನಾಗಿ ಕನ್ನಡ ಭಾಷೆ ಕಾಪಾಡುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಭವನ ನಿರ್ಮಾಣ ಆಗಿರುವುದರಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಾಹಿತ್ಯ ಅಭಿರುಚಿಯು ಮಕ್ಕಳಲ್ಲಿ ಭಾಷಾಭಿಮಾನ ಮೂಡಲು ಪ್ರೇರಣೆಯಾಗಲಿದೆ ಎಂದರು.
ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ಎಚ್.ಗಣಪತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಗೆ ತೊಂದರೆ ಆದರೆ ಎಲ್ಲರೂ ಹೋರಾಟಕ್ಕೆ ನಿಲ್ಲುತ್ತೇವೆ ಎಂದರು.
ಸಾಹಿತಿ ರೇವಣಪ್ಪ ಬಿದರಗೇರಿ ಅವರ ಬಿಟ್ಟೆನೆಂದರೂ ಬಿಡದು ಮಾಯೆ ಕಥಾ ಸಂಕಲನ, ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಅವರ ಅಂಧಕಾರದಿಂದ ಬೆಳಕಿನಡೆಗೆ ಕೃತಿ ಬಿಡುಗಡೆಗೊಳಿಸಲಾಯಿತು. 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಅದ್ದೂರಿಯಾಗಿ ನಡೆಯಿತು.
ಕೆರೆಗಳ ನಾಡೆಂದು ಘೋಷಿಸಿಸೊರಬ ತಾಲೂಕಿನಲ್ಲಿ ಹೆಚ್ಚು ಕೆರೆಗಳಿದ್ದು, ಅವುಗಳ ಸಂವರ್ಧನೆ ಮಾಡುವ ಜತೆ ಸೊರಬವನ್ನು ಕೆರೆಗಳ ನಾಡು ಎಂದು ಘೋಷಿಸಲು ಸಮ್ಮೇಳನಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಮನವಿ ಮಾಡಿದರು. ಉತ್ತಮ ಯೋಜನೆಗಳಿಲ್ಲದೆ ವರದಾ ಹಾಗೂ ದಂಡಾವತಿ ನದಿಗಳು ರೈತರಿಗೆ ವರವಾಗಿಲ್ಲ. ಶಾಶ್ವತ ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಹಿಂದಿ ಮೂರನೇ ಭಾಷೆಯಾಗಿ ಕಡ್ಡಾಯ ಆಗುವುದು ಬೇಡ ಎನ್ನುವ ನಿಯಮ ಸ್ವಾಗತಿಸುತ್ತೇವೆ. ಬಹುತ್ವದ ಭಾರತದಲ್ಲಿ 1900 ಭಾಷೆ ಬಳಸುವ ಜನರಿದ್ದಾರೆ. ಈ ಎಲ್ಲ ಭಾಷೆಗಳು ಆಧುನಿಕ ಸಮಾಜದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ತಮ್ಮ ಅಸ್ತಿತ್ವವನ್ನು ಉಳಿಸಬೇಕಿದೆ. ಪಾಲಕರ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಯ ಅವನತಿಗೆ ಕಾರಣವಾಗಬಾರದು ಎಂದು ತಿಳಿಸಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಾಚಾರ್, ಪ್ರಜ್ವಲ್ ಚಂದ್ರಗುತ್ತಿ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಂ.ಡಿ.ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜೈಶೀಲಗೌಡ, ಸಮಾಜ ಚಿಂತಕ ರಾಜಪ್ಪ ಮಾಸ್ತರ್, ವೈದ್ಯ ಡಾ. ಎಂ.ಕೆ.ಭಟ್ ಮತ್ತಿತರರಿದ್ದರು.