ಶಿವಮೊಗ್ಗದಲ್ಲಿ ಕನಕದಾಸರ ಜಯಂತಿಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಆರ್.ಪ್ರಸನ್ನಕುಮಾರ್, ಚೇತನ್ ಕೆ. ಗೌಡ, ಸಿ.ಜಿ.ಮಧುಸೂದನ್, ಎಸ್.ಟಿ.ಹಾಲಪ್ಪ, ಎಸ್.ಪಿ.ಶೇಷಾದ್ರಿ, ಬಿ.ನಿಖಿಲ್, ವಿ.ಅಭಿಷೇಕ್ ಇತರರಿದ್ದರು. 
ಶಿವಮೊಗ್ಗ

ಕನಕದಾಸರು ದೇಶದ ಸಾಂಸ್ಕೃತಿಕ ಅಸ್ಮಿತೆ Kanakadasa Jayanti

ಶಿವಮೊಗ್ಗ: ಕನಕದಾಸರು ನಮ್ಮ ದೇಶದ ಸಾಂಸ್ಕೃತಿಕ ಅಸ್ಮಿತೆ ಹಾಗೂ ಮಾನವೀಯತೆಯನ್ನು ಎತ್ತಿಹಿಡಿದ ಸಮಾಜ ಸುಧಾರಕ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.

ಶಿವಮೊಗ್ಗ: ಕನಕದಾಸರು ನಮ್ಮ ದೇಶದ ಸಾಂಸ್ಕೃತಿಕ ಅಸ್ಮಿತೆ ಹಾಗೂ ಮಾನವೀಯತೆಯನ್ನು ಎತ್ತಿಹಿಡಿದ ಸಮಾಜ ಸುಧಾರಕ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.

ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ಕೇವಲ ಅಕ್ಷರಗಳನ್ನು ಜೋಡಿಸಿದವರಲ್ಲ. ಬದಲಿಗೆ ನಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಮಾರ್ಗದರ್ಶನ ನೀಡಿದ ದಾರ್ಶನಿಕ ಎಂದರು.

ಕನಕದಾಸರು ರಚಿಸಿದ 300ಕ್ಕೂ ಹೆಚ್ಚು ಕೀರ್ತನೆಗಳು ಕೇವಲ ಸಾಲುಗಳಲ್ಲ. ಅವು ಮನುಷ್ಯನ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯ ಮೌಲ್ಯಗಳನ್ನು ಒಳಗೊಂಡಿವೆ. ಸಮಾಜಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವ ಆಶಯಗಳು ಈ ಸಾಹಿತ್ಯದಲ್ಲಿವೆ. ಅಪಮಾನ, ಕಷ್ಟದ ಸಂದರ್ಭ ಮತ್ತು ಜಾತಿ ತಾರತಮ್ಯದಂತಹ ಸನ್ನಿವೇಶಗಳಲ್ಲಿ ಕುಗ್ಗದೆ ಭಕ್ತಿ ಗೀತೆಗಳು ಮತ್ತು ಕೀರ್ತನೆಗಳ ಮೂಲಕ ಕೃಷ್ಣನನ್ನೇ ಒಲಿಸಿಕೊಂಡ ಅವರ ನಡೆ ಅನುಕರಣೀಯ ಎಂದು ಹೇಳಿದರು.

ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ಎಲ್ಲ ದಾರ್ಶನಿಕರ ಕುರಿತ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಸಾಧ್ಯವಾಗದಿದ್ದರೂ ಶಾಲೆ ಆರಂಭವಾದ ಮೊದಲ ಅವಧಿಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಒಂದು ಪುಟ ಅವರ ಬಗ್ಗೆ ಮಾತನಾಡುವ ಅವಕಾಶ ಕಲ್ಪಿಸಬೇಕು. ಸರ್ಕಾರದ ಮೂಲಕವೇ ದಾರ್ಶನಿಕರ ಮಾಹಿತಿಯನ್ನು ರೂಪಿಸಿ ವಾಟ್ಸ್‌ಆ್ಯಪ್ ಅಥವಾ ಮುದ್ರಿತ ಪ್ರತಿಯ ಮೂಲಕ ಬಿಇಒ ಅಥವಾ ಡಿಡಿಪಿಐ ಕಚೇರಿಗಳಿಂದ ಶಾಲೆಗಳಿಗೆ ತಲುಪಿಸಿದರೆ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ತಿಳಿಸಿಕೊಡಬಹುದು ಎಂದು ಸಲಹೆ ನೀಡಿದರು.

ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ, ಸೂಡಾ ಅಧ್ಯಕ್ಷ ಸಿ.ಜಿ.ಮಧುಸೂದನ್, ಜಿಲ್ಲಾಮಟ್ಟದ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಟಿ.ಹಾಲಪ್ಪ, ಎಸ್ಪಿ ಬಿ.ನಿಖಿಲ್, ಎಡಿಸಿ ವಿ.ಅಭಿಷೇಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್,ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಹಾ.ಮ.ನಾಗಾರ್ಜುನ ಇತರರಿದ್ದರು.

ಕನಕ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ 3 ಕೋಟಿ ರೂ. ಮತ್ತು ಶಾಸಕ ಎಸ್.ಎನ್.ಚನ್ನಬಸಪ್ಪ ತಮ್ಮ ಶಾಸಕರ ನಿಧಿಯಿಂದ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ನೀಡಿದ್ದಾರೆ. ವೈಯಕ್ತಿಕವಾಗಿಯೂ ಸಹಕಾರ ನೀಡಿದ್ದು, ಸರ್ಕಾರ, ಸಮಾಜ ಹಾಗೂ ಮುಖಂಡರೆಲ್ಲರ ಸಹಾಯದಿಂದ ಭವ್ಯವಾದ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು.
ಆರ್.ಪ್ರಸನ್ನಕುಮಾರ್, ಜಿಲ್ಲಾ ಕನಕ ಸಮಾಜದ ಪ್ರಧಾನ ಕಾರ್ಯದರ್ಶಿ