- ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ
- ಪತಿ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ನ್ಯಾಯಕ್ಕಾಗಿ ಅಲೆದಾಟ
- ಅಳಲು ತೋಡಿಕೊಂಡ ಚಂದ್ರಶೇಖರನ್ ಪತ್ನಿ ಕವಿತಾ
ಶಿವಮೊಗ್ಗ: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ(Karnataka Valmiki Development Corporation)ದ ಬಹುಕೋಟಿ ಹಗರಣದಲ್ಲಿ ಬಿ.ನಾಗೇಂದ್ರ ಎರಡನೇ ಬಾರಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ನಿಗಮದ ಲೆಕ್ಕ ಅಧೀಕ್ಷಕರಾಗಿದ್ದ ನನ್ನ ಪತಿ ಚಂದ್ರಶೇಖರನ್ ಸಾವಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಚಂದ್ರಶೇಖರನ್ ಪತ್ನಿ ಕವಿತಾ ಅಳಲು(Chandrasekaran's wife Kavita cries) ತೋಡಿಕೊಂಡಿದ್ದಾರೆ.
ಬಿ.ನಾಗೇಂದ್ರ(B.Nagendra) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರವಾಗಿ ಶಿವಮೊಗ್ಗದಲ್ಲಿ ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರ ಮೇ 26ರಂದು ಡೆತ್‌ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ ಇಲ್ಲಿವರೆಗೆ ನಮ್ಮ ಕುಟುಂಬ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
2ನೇ ಬಾರಿಯೂ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ(Resignation) ನೀಡಿದ್ದಾರೆ. ಅದು ಅವರಿಗಾದ ಮುಖಭಂಗ. ಆದರೆ, ನನ್ನ ಪತಿಯ ಸಾವಿಗೆ ನ್ಯಾಯ ಕೊಡಿಸಿ ಎನ್ನುವುದು ನಮ್ಮ ಬೇಡಿಕೆಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳು ಹಾಗೂ ಒಬ್ಬರು ಬ್ಯಾಂಕ್ ಅಧಿಕಾರಿ ತಮ್ಮ ಪಾಡಿಗೆ ಆರಾಮಾಗಿ ಓಡಾಡಿಕೊಂಡಿದ್ದಾರೆ. ಕೆಲಸಕ್ಕೆ ಬರುತ್ತಿದ್ದಾರೆ. ಸಕಾಲಕ್ಕೆ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಅವರೆಲ್ಲರೂ ಆರಾಮಾಗಿದ್ದಾರೆ. ಅವರಿಗೆ ಕಾನೂನಾತ್ಮಕವಾಗಿ ಯಾವುದೇ ಶಿಕ್ಷೆ ಆಗಲಿಲ್ಲ. ಅಮಾನತು ಅಥವಾ ಮತ್ತೊಂದು ಮಗದೊಂದು ಯಾವುದನ್ನೂ ಮಾಡಿಲ್ಲ. ಆದರೆ, ನನ್ನ ಪತಿಯ ಸಾವಿಗೆ ನ್ಯಾಯ ಎಲ್ಲಿ ಸಿಕ್ಕಂತಾಯಿತು ಎಂದು ಪ್ರಶ್ನಿಸಿದರು.
ನಿಗಮದಲ್ಲಿ ನಡೆದ 187 ಕೋಟಿ ರೂ. ಬಡವರ ಹಣ. ಅದು ಈವರೆಗೂ ನಿಗಮಕ್ಕೆ ವಾಪಸ್ ಬಂದಿಲ್ಲ. ನನ್ನ ಪತಿಯ ಪಿಎಫ್ ಹಣ(PF money) ಕೂಡ ಬಂದಿಲ್ಲ. ಎರಡು ವರ್ಷ ಆಯ್ತು ಕೇಳಿ ಕೇಳಿ ಸಾಕಾಗಿದೆ. ನನ್ನ ಹಿರಿಯ ಮಗನ ಕೆಲಸದ ವಿಚಾರದಲ್ಲಿ ನಮಗೆ ಸಮಾಧಾನ ಇಲ್ಲ. ನನ್ನ ಮಗ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್(Hotel Management Course)ಗೆ ಹೋಗಬೇಕಿತ್ತು. ಆದರೆ, ಅವನಿಗೆ ಸಮಾಜ ಕಲ್ಯಾಣ ಇಲಾಖೆ(Social Welfare Department)ಯಲ್ಲಿ ನೈಟ್ ವಾಚ್‌ಮ್ಯಾನ್ ಕೆಲಸ ನೀಡಿದ್ದಾರೆ. ನನ್ನ ಮಗ ಈಗ ದ್ವಿತೀಯ ಪಿಯುಸಿ ಮುಗಿಸಿದ್ದಾನೆ. ಆತನ ಓದಿಗೆ ತಕ್ಕಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಡಿಎ ಅಂತಹ ಯಾವುದಾದೊಂದು ಕೆಲಸ ನೀಡಬೇಕು ವಿನಂತಿಸಿದರು.
ನನ್ನ ಪತಿಯ ಪಿಎಫ್ ಹಣಕ್ಕಾಗಿ ಕಚೇರಿಗೆ ಹೋದರೆ ಅಲ್ಲಿನ ವ್ಯವಸ್ಥಾಪಕ ನಿರ್ದೇಶಕ(Managing Director) ಸರಿಯಾಗಿ ಮಾತನಾಡಲ್ಲ. ಮನವಿಯನ್ನು ಕೊಟ್ಟು ಹೋಗಿ ಅಂತ ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ಪತಿಯ ಸಾವಿಗೆ ಕಾರಣರಾದ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಮುಂದೆ ಈ ರೀತಿಯಲ್ಲಿ ಯಾವ ಅಧಿಕಾರಿಗಳಿಗೂ ಅನ್ಯಾಯವಾಗಬಾರದು ಎಂದು ಮನವಿ ಮಾಡಿದರು.