ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು. 
ಶಿವಮೊಗ್ಗ

ಹೋರಾಟಕ್ಕೆ ಕೈಜೋಡಿಸಿದ್ದು ಶೋ, ಮೋಜು-ಮಸ್ತಿಗಲ್ಲ; ವಿಜಯೇಂದ್ರ ತಿರುಗೇಟು |vijayendra

ಪ್ರಮುಖ ಮುಖ್ಯಾಂಶಗಳು

  • ಟೀಕೆ ಮಾಡುವುದನ್ನು ಬಿಟ್ಟು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ
  • ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಸ್ವಪಕ್ಷದಲ್ಲೇ ಬಡಿದಾಟ
  • ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ
ಶಿವಮೊಗ್ಗ: ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೆಳಗಾವಿ(Belgaum) ಜಿಲ್ಲೆಯಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರು. ಸರ್ಕಾರ ಆ ಬಗ್ಗೆ ಗಮನ ಹರಿಸಿರಲಿಲ್ಲ. ಹಾಗಾಗಿ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿದ್ದ  ಬೆಳೆಗಾರರ ಪ್ರತಿಭಟನೆಗೆ ನಾನೂ ಕೈಜೋಡಿಸಿದ್ದೆ. ನಾನು ಹೋಗಿದ್ದು ಯಾವುದೇ ಶೋ ಮಾಡಲಿಕ್ಕೆ, ಮೋಜು-ಮಸ್ತಿಗಾಗಿ ಅಲ್ಲ.
ಇದು ಸಿಎಂ ಆದಿಯಾಗಿ ಕಾಂಗ್ರೆಸ್ ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(vijayendra) ನೀಡಿದ ತಿರುಗೇಟು.
ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶೋ(Show) ಮಾಡಲಿಕ್ಕೆ ಹೋಗಿದ್ದರೆ ಅವರೂ ಬರಬಹುದಿತ್ತಲ್ವವೇ ?, ರೈತರ ಸಮಸ್ಯೆ ಬಗೆಹರಿಸುವುದು ಪ್ರತಿಪಕ್ಷವಾದ ಬಿಜೆಪಿ(BJP)ಯ ಆದ್ಯ ಕರ್ತವ್ಯ. ಇಂತಹ ಟೀಕೆಗಳನ್ನು ಮಾಡುವುದನ್ನು ಬಿಟ್ಟು ಬೆಳೆಗಾರರ ಸಮಸ್ಯೆಗೆ ಪರಿಹಾರ ಮಾರ್ಗವನ್ನು ಸರ್ಕಾರ ಕಂಡುಕೊಳ್ಳಬೇಕಿದೆ ಎಂದರು.
ಬರ, ನೆರೆ ಬಂದಾಗಲೂ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ಇದೀಗ ಕಬ್ಬಿನ ವಿಚಾರದಲ್ಲೂ ಕೇಂದ್ರದತ್ತ ಬೆರಳು ಮಾಡುತ್ತಿದ್ದಾರೆ. ಹಾಗಿದ್ದರೆ ಎರಡೂವರೆ ವರ್ಷದಿಂದ ಇವರು ಮಾಡುತ್ತಿರುವುದಾದರೂ ಏನು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಸ್ವಪಕ್ಷದಲ್ಲೇ ಬಡಿದಾಟ ನಡೆಯುತ್ತಿದೆ. ಬಡಿದಾಟವನ್ನು ಬದಿಗಿಟ್ಟು ರೈತರು, ಬಡವರ ಬಗ್ಗೆ ರಾಜ್ಯ ಸರ್ಕಾರ ಕಿಂಚಿತ್ತಾದರೂ ಗಮನ ಹರಿಸಬೇಕಿದೆ. ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿನ ಬದಲಾವಣೆ ಬಗ್ಗೆ ಅವರ ಪಕ್ಷದ ಸಚಿವರೇ ಮಾತನಾಡಿಕೊಳ್ಳುತ್ತಿದ್ದಾರೆ. ಮತದಾನೋತ್ತರ ಸಮೀಕ್ಷೆ ನಿಜವಾಗಲಿದ್ದು, ಬಿಹಾರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.