ಸೊರಬ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ. ಎಂ.ಕೆ.ಭಟ್, ರಾಜಪ್ಪ ಮಾಸ್ಟರ್, ಶಿವಾನಂದ ಪಾಣಿ, ಮಧುರಾಯ್ ಶೇಟ್, ಎ.ವಿ.ಪವಿತ್ರಾ ಇತರರಿದ್ದರು.
ಸೊರಬ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ಕನ್ನಡ ಮನಸ್ಸುಗಳು ಒಂದಾಗಿ ಕೈಜೋಡಿಸಬೇಕು. ಆಗ ಸಾಹಿತ್ಯ ಕೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ ಎಂದು ವೈದ್ಯ ಎಂ.ಕೆ.ಭಟ್ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ಅನೇಕ ಮಹನೀಯರು ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಭವನ ಲೋಕಾರ್ಪಣೆ ಆಗಿದೆ. ಕನ್ನಡ ಮನಸ್ಸುಗಳು, ಸಾಹಿತ್ಯಾಭಿಮಾನಿಗಳು ಈ ಭವನದಲ್ಲಿ ಸಾಹಿತ್ಯ ಚಟುವಟಿಕೆ ನಡೆಸುವಂತಾಗಬೇಕು. ಆದರೆ ನಮ್ಮ ನೆಲದ ಭಾಷೆ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ನೋಡಿದಾಗ ಬೇಸರವಾಗುತ್ತದೆ ಎಂದರು.
ಕನ್ನಡ ಉಪನ್ಯಾಸಕಿ ಎ.ವಿ.ಪವಿತ್ರಾ ಮಾತನಾಡಿ, ಮೈಸೂರು ಒಡೆಯರ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ಪರಂಪರೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಕನ್ನಡ ಭಾಷೆ, ಸಾಹಿತ್ಯ ಕಟ್ಟುವಲ್ಲಿ ಸಾಹಿತಿಗಳ ಪಾತ್ರ ಶ್ಲಾಘನೀಯ. ತಾಲೂಕಿನಲ್ಲಿ 700 ಆಜೀವ ಸದಸ್ಯರಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು ಎಂದರು. ಸ್ಪಂದನಾ, ವಂದನಾ, ಪ್ರಿಯಾ, ಚಂದನಾ ಭರತನಾಟ್ಯ ಪ್ರದರ್ಶಿಸಿದರು. ಪರಿಷತ್ ಸದಸ್ಯ ಮಹೇಶ್ ಖಾರ್ವಿ ಜನಪದ ಗೀತೆ ಹಾಡಿದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಾಚಾರ್, ಚಿಂತಕ ರಾಜಪ್ಪ ಮಾಸ್ಟರ್, ಶಿವಾನಂದ ಪಾಣಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಕಸಾಪ ಮಾಜಿ ಅಧ್ಯಕ್ಷ ಶಿವಾನಂದ ಬಿಳಗಿ, ರೇವಣಪ್ಪ ಬಿದರಗೇರಿ, ಮಾಲತೇಶ್, ಸುಗಮ ಸಂಗೀತ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಗುರುಮೂರ್ತಿ, ಸುನಂದಾ, ಶಿಕ್ಷಕ ಮಾಲತೇಶ್, ಕಲ್ಲಪ್ಪ, ಅರುಣಕುಮಾರ್ ಇದ್ದರು.