ಚಿನ್ನಾಭರಣ ಕಳವು ಸಂಗ್ರಹ ಚಿತ್ರ. 
ಶಿವಮೊಗ್ಗ

ಐರಾವತ ಬಸ್‌ನಲ್ಲಿ 34.52ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು | Jewelry Theft

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಚಿನ್ನದ ವ್ಯಾಪಾರಿ
  • ತೀರ್ಥಹಳ್ಳಿಯ ಅಂಗಡಿಗಳಿಂದ ಬಂದಿದ್ದ ಆರ್ಡರ್
  • ಲಾಡ್ಜ್‌ವೊಂದರಲ್ಲಿ ರೂಂ ಪಡೆದು ಬ್ಯಾಗ್ ಪರಿಶೀಲಿಸಿದಾಗ ಶಾಕ್
ಶಿವಮೊಗ್ಗ: ಐರಾವತ ಬಸ್‌(Airavata Bus)ನಲ್ಲಿ ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಚಿನ್ನದ ವ್ಯಾಪಾರಿಯೊಬ್ಬರ ಬ್ಯಾಗ್‌ನಲ್ಲಿದ್ದ 34.52ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು(Jewelry Theft)ಮಾಡಲಾಗಿದೆ.
ಬೆಂಗಳೂರಿನ ನಿವಾಸಿ ಕಲೈವಣ್ಣನ್(45) ಹಣ ಮತ್ತು ಆಭರಣ ಕಳೆದುಕೊಂಡ ಚಿನ್ನದ ವ್ಯಾಪಾರಿ. ಕಳೆದ 10 ವರ್ಷಗಳಿಂದ ತೀರ್ಥಹಳ್ಳಿ ಸುತ್ತಮುತ್ತಲಿನ ಜುವೆಲರಿ ಅಂಗಡಿ(Jewelry Shop)ಗಳಿಗೆ ಚಿನ್ನದ ಆಭರಣ ಪೂರೈಸುತ್ತಿದ್ದರು. ತೀರ್ಥಹಳ್ಳಿಯ ಅಂಗಡಿಗಳಿಂದ ಆರ್ಡರ್ ಬಂದಿದ್ದ ಹಿನ್ನೆಲೆಯಲ್ಲಿ ಕಲೈವಣ್ಣನ್ ತಮ್ಮ ಸಹೋದರ ಕರುಣಾಕರ್ ಅವರೊಂದಿಗೆ ಮೆಜೆಸ್ಟಿಕ್‌ನಲ್ಲಿ ಐರಾವತ ಬಸ್ ಹತ್ತಿದ್ದರು. 
ಆಭರಣಗಳಿದ್ದ ಬ್ಯಾಗ್ ಅನ್ನು ತಮ್ಮ ಸೀಟಿನ ಮೇಲ್ಭಾಗದ ಲಗೇಜ್ ಜಾಗದಲ್ಲಿರಿಸಿದ್ದರು. ಮುಂಜಾನೆ 5ರ ಸುಮಾರಿಗೆ ಬಸ್ ಭದ್ರಾವತಿ(Bhadravati) ತಲುಪಿದಾಗ ಬ್ಯಾಗ್ ಸುರಕ್ಷಿತವಾಗಿತ್ತು. ಬೆಳಗ್ಗೆ 7 ಗಂಟೆಗೆ ತೀರ್ಥಹಳ್ಳಿಗೆ ಬಂದು ಅಲ್ಲಿನ ಲಾಡ್ಜ್‌ವೊಂದರಲ್ಲಿ ರೂಂ ಪಡೆದು ಬ್ಯಾಗ್ ಪರಿಶೀಲಿಸಿದಾಗ ಒಳಗೆ ಸಣ್ಣ ಬಾಕ್ಸ್‌ಗಳಲ್ಲಿಟ್ಟಿದ್ದ 254.430 ಗ್ರಾಂನ ವಿವಿಧ ಚಿನ್ನಾಭರಣಗಳು ಇರಲಿಲ್ಲ. ಬ್ಯಾಗ್‌ನ ಜಿಪ್ ಹಾಗೂ ಬೀಗಕ್ಕೆ ಯಾವುದೇ ಹಾನಿಯಾಗದಂತೆ ಕಳ್ಳರು ಆಭರಣ ಕಳವು ಮಾಡಿದ್ದಾರೆ.
ಚಿನ್ನಾಭರಣಗಳನ್ನು ಬೆಂಗಳೂರಿನ ಅಂಗಡಿಯಲ್ಲೇ ಬಿಟ್ಟು ಬಂದಿರಬಹುದೆಂಬ ಅನುಮಾನದಿಂದ ಕಲೈವಣ್ಣನ್ ವಾಪಸ್ ಹೋಗಿ ಹುಡುಕಾಡಿದ್ದಾರೆ. ಅಲ್ಲಿಯೂ ಸಿಗದಿದ್ದಾಗ ಪರಿಚಯಸ್ಥರೊಂದಿಗೆ ಚರ್ಚಿಸಿ ಚಿನ್ನದ ಮಾವಿನಕಾಯಿ ಸರ(Gold mango chain), ಓಲೆ, ಜುಮುಕಿ, ಉಂಗುರಗಳು ಹಾಗೂ ಮುತ್ತಿನ ಸರಗಳು(Pearl necklaces) ಕಳವು ಮಾಡಲಾಗಿದೆ ಎಂದು ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.