ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿದರು. ಶಾರದಾ ಪೂರ‌್ಯಾನಾಯ್ಕಾ, ಕೆ.ಎನ್.ರಾಮಕೃಷ್ಣ, ಶಾರದಾ ಅಪ್ಪಾಜಿ ಗೌಡ, ಕಡಿದಾಳ್ ಗೋಪಾಲ್, ಸಂಗಯ್ಯ, ಎಚ್.ಆರ್.ಹನುಮಂತಪ್ಪ, ಗಂಧದಮನೆ ನರಸಿಂಹ, ಗೀತಾ ಸತೀಶ್ ಇತರರಿದ್ದರು.
- ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೂಕ್ತ
- ವಾರದಿಂದ ವಕೀಲರ ಭವನದ ಎದುರು ಹೋರಾಟ
- ಮುಖ್ಯಮಂತ್ರಿ ಸಿದ್ದರಾಮಯ್ಯ ಮನವರಿಕೆ ಭರವಸೆ
ಶಿವಮೊಗ್ಗ: ಮಧ್ಯ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ(HighCourt Mobile Bench) ಸ್ಥಾಪಿಸಬೇಕೆಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಕಳೆದೊಂದು ವಾರದಿಂದ ವಕೀಲರ ಭವನದ ಎದುರು ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಬೆಂಬಲ(JDS workers Support) ವ್ಯಕ್ತಪಡಿಸಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪುವವರೆಗೆ ಜೆಡಿಎಸ್ ಪಕ್ಷ(Jds party) ಸದಾ ಬೆಂಬಲಿಸುತ್ತದೆ. ಜೂ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅನೇಕ ಸಚಿವರು ಶಿವಮೊಗ್ಗಕ್ಕೆ ಬರುತ್ತಿದ್ದು, ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಬೇಕು. ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ(Madhu Bangarappa) ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಗಮನಕ್ಕೆ ತಂದಿದ್ದಾರೆ. ಆದರೂ ಸಿಎಂ ಇಲ್ಲಿಗೆ ಬಂದಾಗ ಇಲ್ಲಿನ ಎಲ್ಲ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರೊಂದಿಗೆ ಮತ್ತೊಮ್ಮೆ ಭೇಟಿಯಾಗಿ ಹೈಕೋರ್ಟ್ ಪೀಠ ಶಿವಮೊಗ್ಗಕ್ಕೆ ಏಕೆ ಅವಶ್ಯಕ ಎಂಬುದನ್ನು ಮನವರಿಕೆ ಮಾಡಬೇಕಾಗುತ್ತದೆ. ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲೂ ಈ ಕುರಿತು ಪ್ರಸ್ತಾಪ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ ಮಾತನಾಡಿ, ಸಿಎಂ ಅವರನ್ನು ಒತ್ತಾಯಿಸುವುದು ಮಾತ್ರವಲ್ಲ, ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲೂ ಸಿದ್ಧರಾಗಬೇಕು. ಆಗ ಹೈಕೋರ್ಟ್ ಪೀಠದ ಈ ಬೇಡಿಕೆಗೆ ಬಲ ಬರುತ್ತದೆ. ವಕೀಲರ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಕೆ.ಬಸಪ್ಪ ಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ, ಮುಖಂಡರಾದ ಶಾರದಾ ಅಪ್ಪಾಜಿ ಗೌಡ, ಕಡಿದಾಳ್ ಗೋಪಾಲ್, ವಕೀಲ ಕೆ.ಪಿ.ಶ್ರೀಪಾಲ್, ಸಂಗಯ್ಯ, ಎಚ್.ಆರ್.ಹನುಮಂತಪ್ಪ, ಗಂಧದಮನೆ ನರಸಿಂಹ, ಗೀತಾ ಸತೀಶ್, ಎಸ್.ವಿ.ರಾಜಮ್ಮ, ತ್ಯಾಗರಾಜ್, ಮಂಜುನಾಥ ಬೊಮ್ಮನಕಟ್ಟೆ, ಸತೀಶ್, ದಾದಾಪೀರ್, ಎಸ್.ಎಲ್.ನಿಖಿಲ್, ಪ್ರೇಮ್‌ಕುಮಾರ್, ವಾಜಿದ್ ಇತರರಿದ್ದರು.
"
ಹೋರಾಟ ಬಲವಾಗಬೇಕಾದರೆ ಇನ್ನೂ ಹೆಚ್ಚಿನ ಒತ್ತಡ ಹಾಕಬೇಕು. ಕರಾವಳಿಯಲ್ಲಿ ಹೈಕೋರ್ಟ್ ಪೀಠ ತೆರೆದು ಶಿವಮೊಗ್ಗ ಜಿಲ್ಲೆಯನ್ನು ಅಲ್ಲಿಗೆ ಸೇರಿಸುವುದು ಅವೈಜ್ಞಾನಿಕ ಮತ್ತು ಬಡವರಿಗೆ ಆರ್ಥಿಕ ಹೊರೆಯಾಗಲಿದೆ. ಹಾಗಾಗಿ ಇಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸಬೇಕು.
— ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಉಪಾಧ್ಯಕ್ಷ