ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಪ್ರಮುಖ ಅ.ನಾ.ವಿಜಯೇಂದ್ರರಾವ್ 
ಶಿವಮೊಗ್ಗ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಜಾಥಾ | Sharavathi Pumped Storage

ಪ್ರಮುಖ ಮುಖ್ಯಾಂಶಗಳು

  • ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪಶ್ಚಿಮಘಟ್ಟಕ್ಕೆ ಮಾರಕ
  • ರಾಷ್ಟ್ರಭಕ್ತರ ಬಳಗ ಹಮ್ಮಿಕೊಂಡಿರುವ ರ‌್ಯಾಲಿಗೆ ವಿವಿಧ ಸಂಘಟನೆಗಳು ಬೆಂಬಲ
  • ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಪ್ರಮುಖ ಅ.ನಾ.ವಿಜಯೇಂದ್ರರಾವ್ ಹೇಳಿಕೆ
ಶಿವಮೊಗ್ಗ: ಪಶ್ಚಿಮಘಟ್ಟಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್(Sharavathi Pumped Storage) ಯೋಜನೆ ಕೈಬಿಡುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಏ.16ರಂದು ಬೆಳಗ್ಗೆ 10.30ಕ್ಕೆ ರಾಷ್ಟ್ರಭಕ್ತರ ಬಳಗ ಹಮ್ಮಿಕೊಂಡಿರುವ ಬೃಹತ್ ಸೈಕಲ್, ಕಾರ್, ಬೈಕ್ ಜಾಥಾ(rally)ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಪ್ರಮುಖ ಅ.ನಾ.ವಿಜಯೇಂದ್ರರಾವ್ ಹೇಳಿದರು.
ಶಿವಮೊಗ್ಗ ಸೈಕಲ್ ಕ್ಲಬ್(Cycle Club), ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ, ವೈ.ಎಚ್.ಎ.ಐ. ತರುಣೋದಯ ಘಟಕ ಕೂಡ ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆಯಿಂದ ಪರಿಸರ, ಜೀವ ಸಂಕುಲ ನಾಶವಾಗಲಿದೆ. ಇದರಿಂದ ಆರ್ಥಿಕ, ಸಾಂಸ್ಕೃತಿಕ, ಐತಿಹಾಸಿಕವಾಗಿ ಪಶ್ಚಿಮ ಘಟ್ಟ(Western Ghats)ಗಳಿಗೆ ಹಾನಿ ಆಗಲಿದೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆ ಕೈಬಿಟ್ಟು ಪರಿಸಕ್ಕೆ ಪೂರಕವಾದ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಆ ನಿಟ್ಟಿನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಸೈಕಲ್ ಕ್ಲಬ್‌ನ ಹಿರಿಯ ಸದಸ್ಯ ಡಾ. ಶೇಖರ್ ಗೌಳೇರ್ ಮಾತನಾಡಿ, ಯೋಜನೆಯಿಂದ ಶರಾವತಿ ಅಭಯಾರಣ್ಯ(Sharavati Sanctuary)ದಲ್ಲಿರುವ ಸಿಂಘಳೀಕ ಸಂತತಿ ನಾಶವಾಗುವ ಸಾಧ್ಯತೆ ಇದೆ. 10,700 ಕೋಟಿ ರೂ. ವೆಚ್ಚದ ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ಲಾಭ ಇಲ್ಲ. 16 ಸಾವಿರ ಅಪರೂಪದ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಮರಗಳ ನಾಶವಾಗಲಿವೆ ಎಂದರು. 
ರ‌್ಯಾಲಿಯಲ್ಲಿ 500 ಬೈಕ್‌ಗಳು, 200 ಕಾರುಗಳು, 100 ಸೈಕಲ್‌ಗಳು ಭಾಗವಹಿಸಲಿವೆ. ಬೈಕ್-ಕಾರು ಹಾಗೂ ಸೈಕಲ್ ರ‌್ಯಾಲಿ ಪ್ರತ್ಯೇಕವಾಗಿ ಸಾಗಲಿವೆ. ಬೈಕ್ ಮತ್ತು ಕಾರು ಜಾಥಾಯು ಫ್ರೀಡಂಪಾರ್ಕ್‌(Freedom Park)ನಿಂದ ಹೊರಟು ಪೊಲೀಸ್ ಚೌಕಿ, ಆದಿಚುಂಚನಗಿರಿ ಮಠ, ಗುತ್ತಿ ನರ್ಸಿಂಗ್ ಹೋಮ್, ಬಿಜೆಪಿ ಕಚೇರಿ, ಎಲ್‌ಎಲ್‌ಆರ್ ರಸ್ತೆ,  ಗೋಪಿ ವೃತ್ತ, ಅಮೀರ್ ಅಹ್ಮದ್ ಸರ್ಕಲ್, ಗಾಂಧಿಬಜಾರ್, ರಾಮಣ್ಣಶ್ರೇಷ್ಠಿ ಪಾರ್ಕ್,  ಬೆಕ್ಕಿನಕಲ್ಮಠ ವೃತ್ತ, ಬಿ.ಎಚ್.ರಸ್ತೆ, ವೀರಭದ್ರೇಶ್ವರ ಟಾಕೀಸ್ ಮಾರ್ಗವಾಗಿ ಮಹಾವೀರ ವೃತ್ತ ತಲುಪಲಿದೆ. ಸೈಕಲ್ ಜಾಥಾವು ಲಕ್ಷ್ಮೀ ಟಾಕೀಸ್ ವೃತ್ತ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮಾರ್ಗವಾಗಿ ಮಹಾವೀರ ವೃತ್ತ ತಲುಪಲಿದೆ ಎಂದು ಹೇಳಿದರು.
ಪ್ರಮುಖರಾದ ಪ್ರೊ. ಎಲ್.ಕೆ.ಶ್ರೀಪತಿ,  ಶ್ರೀಕಾಂತ್, ಪರಿಸರ ರಮೇಶ್, ವಾಗೀಶ್, ದಿಲೀಪ್ ನಾಡಿಗ್, ಜನಾರ್ಧನ್ ಪೈ, ಚನ್ನವೀರಪ್ಪ ಗಾಮನಗಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
"

18 ಸಾವಿರ ಟನ್ ಅಪಾಯಕಾರಿ ವಿಸ್ಫೋಟಕ ಬಳಕೆಯಿಂದ ಮುಂದಿನ ದಿನಗಳಲ್ಲಿ ಶರಾವತಿ ಭಾಗದಲ್ಲಿ ಭೂಕಂಪ ಹಾಗೂ ಭೂಕುಸಿತ ಆಗುವ ಸಾಧ್ಯತೆ ಇದೆ ಎಂದು ಪ್ರಣೀತಾ ಕೌಲ್ ಈಗಾಗಲೇ ಕೇಂದ್ರಕ್ಕೆ ವರದಿ ನೀಡಿದ್ದಾರೆ. ಆದರೆ ಕೆಪಿಸಿಎಲ್ ಅದನ್ನು ಕಡೆಗಣಿಸಿ ಯೋಜನೆಗೆ ಮುಂದಾಗಿರುವುದು ದುರ್ದೈವ.