ಶ್ರೀ ಡಾ.ವೀರಸೋಮೇಶ್ವರ ಸ್ವಾಮೀಜಿ, ರಂಭಾಪುರಿ ಪೀಠ
- ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯ
- ಶಿವಮೊಗ್ಗದಲ್ಲಿ ಮೇ 15ರಂದು ಕಾರ್ಯಕ್ರಮ
ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 15ರಂದು ಐಟಿಐ (iti) ಕಾಲೇಜಿನ 32ನೇ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರು ಪಂಚಾಚಾರ್ಯ (panchacharya) ಯುಗಮಾನೋತ್ಸವ ಹಾಗೂ ವೀರಶೈವ (veerashaiva) ಲಿಂಗಾಯತ ವಧು-ವರರ ಸಮ್ಮೇಳನ ಜರುಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ವಿಘ್ನೇಶ್ವರ ನೀ.ಸೋಲಾಪುರ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10ಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಳಲಿ ಮಠದ ಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ದುಗ್ಲಿ-ಕಡೇನಂದಿಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ನೇತೃತ್ವ ವಹಿಸಲಿದ್ದು, ಮಾಚೇನಹಳ್ಳಿ ಟೆಕ್ನೊರಿಂಗ್ಸ್ ಮತ್ತು ಶಶಿ ಭಾರತ ಇಂಡಸ್ಟ್ರಿಯ ವ್ಯವಸ್ಥಾಪಕ ನಿರ್ದೇಶಕಿ ಬಿ.ಎಸ್.ಗೀತಾ, ಮಾಚೇನಹಳ್ಳಿ ಎಂಇಟಿಪಿಎಲ್ ನಿರ್ದೇಶಕ ಜಿ.ಸೋಮಶೇಖರ, ಮಹಾಂತ ಮೋಟಾರ್ಸ್‌ನ ಸಿಇಒ ಎಚ್.ಎಸ್.ರಾಕೇಶ್ ಆರಾಧ್ಯ, ನಂದಿ ಇಂಡಸ್ಟ್ರಿ ಮಾಲೀಕ ಎಚ್.ವಿ.ರವೀಶ್ ಭಾಗವಹಿಸಲಿದ್ದಾರೆ ಎಂದರು.
ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಜೀವ ಸದಸ್ಯೆ ರುಕ್ಮಿಣಿ ವೇದವ್ಯಾಸ, ಕರಡಿ-ಇಳಕಲ್ ಪಟ್ಟಣದ ಶ್ರೀ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಸೊಸೈಟಿ ಕಾರ್ಯದರ್ಶಿ ಶಿವಯ್ಯ ಹಿರೇಮಠ್, ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಜಿ.ವಿರೂಪಾಕ್ಷಯ್ಯ ಶಾಸ್ತ್ರಿ ಇವರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ಪ್ರತಿಭಾವಂತರಿಗೆ ಹಾಗೂ ಉನ್ನತ ಶ್ರೇಣಿಯಲ್ಲಿ ಅಂಕ ಪಡೆದ ಎಸ್‌ಜೆಪಿ ಐಟಿಐ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಬೆಳಗ್ಗೆ ನಿದಿಗೆಯ ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯದಿಂದ ಉಚಿತ ಆರೋಗ್ಯ ತಪಾಸಣೆ, ಶಿವಮೊಗ್ಗದ ವಾಸನ್ ಐ ಕೇರ್ ಇವರಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಿವಮೊಗ್ಗದ ರೋಟರಿ ಚಾರಿಟಿ ಫೌಂಡೇಶನ್‌ನಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ ಎಂದರು.
ವೀರಶೈವ ಲಿಂಗಾಯತ ವಧು-ವರರ ಸಮಾವೇಶದ ಅಧ್ಯಕ್ಷತೆಯನ್ನು ಎಸ್‌ಜೆಪಿ ಐಟಿಐ ಆಡಳಿತ ಮಂಡಳಿಯ ಸದಸ್ಯ ವೀರಸಂಗಯ್ಯ ಬಿದರೆ ವಹಿಸಲಿದ್ದಾರೆ. ರಂಭಾಪುರಿ ಜಗದ್ಗುರುಗಳನ್ನು ಎಂಆರ್‌ಎಸ್ ವೃತ್ತದಿಂದ ಎಸ್‌ಜೆಪಿ ಐಟಿಐವರೆಗೆ ವಿವಿಧ ವಾದ್ಯಗಳೊಂದಿಗೆ ವೇದಘೋಷ, ಕಲಸ, ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಉಮೇಶ್ ಹಿರೇಮಠ್, ಎಚ್.ಪಿ.ಪ್ರದೀಪ ಚಂದ್ರ ಸಿಂಗಟಗೇರಿಮಠ, ಜಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.