ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. ಜೆ.ಸಿ ಗೀತಾ ರಾಜಕುಮಾರ್, ಚನ್ನಪ್ಪ, ಬಿ.ಕೆ.ಮೋಹನ್, ಮಣಿ ಇತರರಿದ್ದರು. 
ಶಿವಮೊಗ್ಗ

ಋಣ ತೀರಿಸುವುದು ನಮ್ಮ ಕರ್ತವ್ಯ | Stone laying

ಭದ್ರಾವತಿ: ಕ್ಷೇತ್ರದ ಜನರಿಗೆ ಮೂಲ ಸೌಕರ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ನೀಡಿದ ಭರವಸೆಯಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಮುಂದೆಯೂ ಹೀಗೆ ಇರಬೇಕು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
ನಗರಸಭೆ ವ್ಯಾಪ್ತಿಯ ವಿವಿಧೆಡೆ 15ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಯೋಜನೆಯಡಿ, ಕೇಂದ್ರ ಪುರಸ್ಕೃತ ಅಮೃತ್-2 ಯೋಜನೆಯಡಿ ಗುರುವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, 1.20 ಕೋಟಿ ರೂ. ವೆಚ್ಚದ ಗ್ಯಾಸ್ ಬರ್ನಿಂಗ್ ಚಿತಾಗಾರ ಹಾಗೂ 3.48 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಾಕ್‌ವೆಲ್ ಮತ್ತು ಇಂಟೆಕ್ ವೆಲ್ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ. ಮತದಾರರ ಋಣ ತೀರಿಸುವುದು ನಮ್ಮ ಜವಾಬ್ದಾರಿ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು. 
ನಗರಸಭೆ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಆರೋಗ್ಯ ಹಾಗು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಜನರು ನೆಮ್ಮದಿ ಜೀವನ ನಡೆಸಬೇಕು ಎಂಬುದು ಶಾಸಕರ ಆಶಯ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹಾಗು ಡಿಸಿಎಂ ಅವರನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಮತ್ತಷ್ಟು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್ ಹೇಮಂತ್, ಸದಸ್ಯರಾದ ಚನ್ನಪ್ಪ, ಬಿ.ಎಂ.ಮಂಜುನಾಥ್, ವಿಜಯ, ಕೆ.ಪಿ.ಪ್ರೇಮಾ, ಬಸವರಾಜ, ನಗರಸಭೆ ಎಇಇ ಬಿ.ಬಿ.ಶಿವಪ್ರಸಾದ್, ಕಿರಿಯ ಅಭಿಯಂತ ಕೆ.ಪ್ರಸಾದ್, ಪರಿಸರ ಅಭಿಯಂತ ಪ್ರಭಾಕರ್, ಸೂಡಾ ಸದಸ್ಯ ಎಚ್.ರವಿಕುಮಾರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್.ಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ತಿಮ್ಮಪ್ಪ, ರಾಜಕುಮಾರ್ ಇತರರಿದ್ದರು.