ಸಾಗರ: ವಿವಿಧ ಜಲ ವಿದ್ಯುತ್ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ಮೊದಲು ಹಕ್ಕುಪತ್ರ ನೀಡಲಿ ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು
ಶರಾವತಿ, ತುಂಗಾ, ಗಾಜನೂರು, ಮಡೆನೂರು, ಭದ್ರಾ, ಅಂಬ್ಲಿಗೊಳ, ತಲಕಳಲೆ ಡ್ಯಾಂನ ಬಹಳಷ್ಟು ಸಂತ್ರಸ್ತರಿಗೆ ಈತನಕ ಬದಲಿ ಭೂಮಿ ನೀಡಿಲ್ಲ. ಹೊಸನಗರ ತಾಲೂಕಿನ ಬಿಳಕಿ ಗ್ರಾಮದ 50ಕ್ಕೂ ಹೆಚ್ಚು ಮುಳುಗಡೆ ಸಂತ್ರಸ್ತ ಕುಟುಂಬಗಳಿಗೆ ನೀಡಿದ ಭೂಮಿಯನ್ನು ಅರಣ್ಯ ಪ್ರದೇಶವೆಂದು ಹೆಸರಿಸಿ ಹಕ್ಕುಪತ್ರ ರದ್ದುಗೊಳಿಸಲು ಉಪವಿಭಾಗಾಧಿಕಾರಿ ಕಚೇರಿಗೆ ಅರಣ್ಯ ಇಲಾಖೆ ಅರ್ಜಿ ಸಲ್ಲಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದವರಿಗೆ ಭೂಹಕ್ಕು ಕೊಡಬೇಕು ಎಂದು ಕಾಯ್ದೆ ಜಾರಿಗೆ ಬಂದಿದ್ದು, ಅನುಷ್ಠಾನಕ್ಕೆ ಬಂದಿಲ್ಲ. ಆರೇಳು ದಶಕಗಳಿಂದ ಸಾಗುವಳಿ ಮಾಡಿಕೊಂಡ ಭೂಮಿ ಹಕ್ಕನ್ನೇ ವಜಾ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ. ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿಗಾಗಿ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆದಿದ್ದಾರೆ. ಸಭೆಯಲ್ಲಿ ಮಲೆನಾಡಿನ ರೈತರು ಎದುರಿಸುತ್ತಿರುವ ಭೂಹಕ್ಕಿನ ಸಮಸ್ಯೆ ಬಗ್ಗೆಯೂ ಗಂಭೀರ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ, ಮುಳುಗಡೆ ಸಂತ್ರಸ್ತರು, ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಸೇರಿಸಿಕೊಂಡು ಚರ್ಚೆ ನಡೆಸಬೇಕು. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಆದೇಶವಾಗಿ ಹೊರಬರಬೇಕು. ಜಿಲ್ಲೆಯ ಎಲ್ಲ ಶಾಸಕರು ಕಸ್ತೂರಿ ರಂಗನ್ ವರದಿ ಜತೆಗೆ ಮಲೆನಾಡಿನ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಸರ್ಕಾರವನ್ನು ಆಗ್ರಹಿಸಬೇಕು. ಪ್ರತಿಭಟನೆ, ಪಾದಯಾತ್ರೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಮಲೆನಾಡು ಭಾಗದಲ್ಲಿ 65 ವಿಧಾನಸಭಾ ಕ್ಷೇತ್ರಗಳಿವೆ. ಎಲ್ಲ ಶಾಸಕರು ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದರು.
ಕೃಷ್ಣಮೂರ್ತಿ, ಆದರ್ಶ, ಕೊಲ್ಲಪ್ಪ, ಉಮೇಶ್, ರಾಮಚಂದ್ರ, ಕೃಷ್ಣಮೂರ್ತಿ, ಶಶಿಕುಮಾರ್, ಹೇಮಂತ್, ಸಂತೋಷ್, ಸ್ವಾಮಿ ನಾಯ್ಕ ಇತರರಿದ್ದರು.