ಪತ್ರಿಕಾ ಭವನದಲ್ಲಿ ಬಿಸಿಸಿಐ ಮಾಧ್ಯಮ ಪ್ರಭಾರ ರಾಘವೇಂದ್ರ, ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್ ಜರ್ಸಿ ಅನಾವರಣಗೊಳಿಸಿದರು.
- ಎನ್‌ಇಎಸ್ ಮೈದಾನದಲ್ಲಿ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್- 2026
- ಎಲ್‌ಇಡಿ ಪರದೆಗಳ ಮೇಲೆ ವಾರಾಂತ್ಯದ ಪಂದ್ಯಗಳ ನೇರ ಪ್ರಸಾರ
- 17ರ ಮಧ್ಯಾಹ್ನ 2.30ಕ್ಕೆ ಪಂಜಾಬ್-ಆರ್‌ಸಿಬಿ ನಡುವವೆ ಹಣಾಹಣಿ
ಶಿವಮೊಗ್ಗ: ನಗರದ ಎನ್‌ಇಎಸ್ ಮೈದಾನದಲ್ಲಿ ಮೇ 16 ಮತ್ತು 17ರಂದು ಬಿಸಿಸಿಐ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್(IPL Fan Park)- 2026 ನಿರ್ಮಿಸಿದ್ದು, ವಾರಾಂತ್ಯದ ಪಂದ್ಯಗಳ ನೇರ ಪ್ರಸಾರವನ್ನು ಬೃಹತ್ ಎಲ್‌ಇಡಿ ಪರದೆಗಳ ಮೇಲೆ ವೀಕ್ಷಿಸಬಹುದು ಎಂದು ಬಿಸಿಸಿಐ ಮಾಧ್ಯಮ ಪ್ರಭಾರಿ ರಾಘವೇಂದ್ರ ಹೇಳಿದರು.
ಸ್ಟೇಡಿಯಂನಲ್ಲೇ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡಿದಂತಹ ಅನುಭವ ಕೊಡುವುದು ಫ್ಯಾನ್ ಪಾರ್ಕ್ ಉದ್ದೇಶವಾಗಿದೆ. ಮೇ 16ರ ಸಂಜೆ 6.30ಕ್ಕೆ ಕೋಲ್ಕತ ನೈಟ್ ರೈಡರ್ಸ್(Kolkata Knight Riders) ಮತ್ತು ಗುಜರಾತ್ ಟೈಟಾನ್ಸ್(Gujarat Titans) ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17ರ ಮಧ್ಯಾಹ್ನ 2.30ಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್(Kings XI Punjab) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)(RCB) ಹಾಗೂ ಸಂಜೆ 6.30ರಿಂದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಹಣಾಹಣಿಯನ್ನು ಕ್ರಿಕೆಟ್ ಅಭಿಮಾನಿಗಳು 32*80 ಅಡಿ ಎಲ್‌ಇಡಿ ಪರದೆ ಮೇಲೆ ವೀಕ್ಷಿಸಬಹುದು ಎಂದರು.
ವಾರಾಂತ್ಯದ ಮೂರು ಪಂದ್ಯಗಳನ್ನು ಉಚಿತವಾಗಿ ನೋಡುವ ಜತೆಗೆ ಕುಟುಂಬ, ಸ್ನೇಹಿತರ ಜತೆಗೂಡಿ ತೆರಳಿ ಆಟೋಟಗಳಲ್ಲಿ ಪಾಲ್ಗೊಳ್ಳಬಹುದು. ಆರು ವಿವಿಧ ಬಗೆ ಕ್ರೀಡೆಗಳಿಗೆ ಅವಕಾಶವಿದೆ. ಆಹಾರ ಮಳಿಗೆಗಳು, ಸಂಗೀತ, ಮರ್ಚೆಂಡೈಸ್, ಕಿಡ್ಸ್ ಜೋನ್(Kids Zone) ಸೇರಿ ವೈವಿಧ್ಯಮಯ ಚಟುವಟಿಕೆಗಳಿಗೆ ಅವಕಾಶವಿದೆ. ಪ್ರತಿ ದಿನ ಕನಿಷ್ಠ 10 ಸಾವಿರ ಕ್ರಿಕೆಟ್ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್ ಸುದ್ದಿಗೋಷ್ಠಿಯಲ್ಲಿದ್ದರು.
"
ಗರ್ಭಿಣಿಯರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಭದ್ರತೆ ಜತೆಗೆ ಖಾಸಗಿ ಭದ್ರತೆ ಒದಗಿಸಲಾಗುತ್ತಿದೆ. ಆಂಬುಲೆನ್ಸ್, ಅಗ್ನಿ ಶಾಮಕ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ವಾರಾಂತ್ಯದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಬಂದು ಫ್ಯಾನ್ ಪಾರ್ಕ್‌ಗೆ ಭೇಟಿ ನೀಡಬಹುದು.
— ರಾಘವೇಂದ್ರ, ಬಿಸಿಸಿಐ ಮಾಧ್ಯಮ ಪ್ರಭಾರ