ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ಫ್ಯಾನ್‌ಪಾರ್ಕ್.
- ಮೇ 16 ಮತ್ತು 17ರಂದು ವಾರಾಂತ್ಯದ ಐಪಿಎಲ್ ಪಂದ್ಯಗಳ ರಸದೌತಣ
- ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಟಿ-20 ಪಂದ್ಯಗಳ ಕಲರವ
- ದೊಡ್ಡ ಪರದೆಯಲ್ಲಿ ಐಪಿಎಲ್ ಪಂದ್ಯಗಳ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ
ಶಿವಮೊಗ್ಗ: ದ್ವಿತೀಯ ದರ್ಜೆ ನಗರಗಳಿಗೆ ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಟಿ-20 ಪಂದ್ಯಗಳನ್ನು ಬಿಸಿಸಿಐ ಅವಕಾಶ ನೀಡುತ್ತಿಲ್ಲ ಎಂಬ ಕೊರಗು ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಮತ್ತೊಂದೆಡೆ 19ನೇ ಆವತ್ತಿಯ ಅರ್ಧ ಚರಣದ ಪಂದ್ಯಗಳು ಮುಕ್ತಾಯಗೊಂಡಿದ್ದು, 2019ರ ಬಳಿಕ ಶಿವಮೊಗ್ಗದಲ್ಲಿ ಎರಡನೇ ಬಾರಿಗೆ ಐಪಿಎಲ್ ಫ್ಯಾನ್ ಪಾರ್ಕ್(IPL Fan Park)ಗೆ ಅವಕಾಶ ದೊರೆತಿದೆ.
ಬಿಸಿಸಿಐ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ 2026ರ 2ನೇ ಹಂತ ಘೋಷಿಸಿದ್ದು, 18 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 30 ನಗರಗಳಲ್ಲಿ ನೇರಪ್ರಸಾರ ಮಾಡಬಹುದಾಗಿದ್ದು, ಈ ಬಾರಿ ಮೇ 16 ಮತ್ತು 17ರಂದು ವಾರಾಂತ್ಯದ ಐಪಿಎಲ್ ಪಂದ್ಯ(Weekend IPL match)ಗಳ ರಸದೌತಣ ಉಣಬಡಿಸಲು ಟಾಟಾ ಐಪಿಎಲ್ ಫ್ಯಾನ್ ಪಾರ್ಕ್-2026 ಅನ್ನು ನಗರದ ಎನ್‌ಇಎಸ್ ಮೈದಾನದಲ್ಲಿ ತೆರೆಯಲಾಗುತ್ತಿದೆ.
ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳು ನಡೆಯದ ನಗರಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ ಮಾಡಿ ಸ್ಟೇಡಿಯಂನಲ್ಲೇ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡಿದಂತಹ ಅನುಭವನ್ನು ಕೊಡುವುದು ಫ್ಯಾನ್ ಪಾರ್ಕ್‌ನ ಉದ್ದೇಶವಾಗಿದೆ. 2019ರ ಬಳಿಕ ಮತ್ತೊಮ್ಮೆ ಮಲೆನಾಡು ಶಿವಮೊಗ್ಗದಲ್ಲಿ ದೊಡ್ಡ ಪರದೆ ಮೇಲೆ ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಸಿಹಿಮೊಗ್ಗೆಯ ಜನತೆಗೆ ಸಿಗಲಿದೆ.
ಮೆ 16ರಂದು ಸಂಜೆ 6.30ಕ್ಕೆ ಕೊಲ್ಕತ್ತ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟನ್ಸ್ ಹಾಗೂ 17ರಂದು ಮಧ್ಯಾಹ್ನ 2.30ಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಆರ್‌ಸಿಬಿ(ರಾಯಲ್ ಚಾಲೆಂಜರ್ಸ್ ಬೆಂಗಳೂರು) ನಡು ನಡುವಿನ ನೇರ ಹಣಾಹಣಿಯನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದು. ಲೈವ್ ಪಂದ್ಯ(Live match)ಗಳನ್ನು ಉಚಿತ(Free)ವಾಗಿ ನೋಡುವ ಜತೆಗೆ ಕುಟುಂಬ, ಸ್ನೇಹಿತರ ಜತೆಗೂಡಿ ತೆರಳಿ ಆಹಾರ, ಆಟೋಟಗಳಲ್ಲಿ ಪಾಲ್ಗೊಳ್ಳಬಹುದು.
ಫ್ಯಾನ್ ಪಾರ್ಕ್ ವಿಶೇಷತೆಗಳು
ಫ್ಯಾನ್ ಪಾರ್ಕ್ ಕೇವಲ ಪಂದ್ಯ ನೋಡುವುದಕ್ಕಲ್ಲ, ಇದು ಒಂದು ಮಿನಿ ಕಾರ್ನೀವಲ್‌ನಂತಿರಲಿದೆ. ನೇರ ಪಂದ್ಯ ವೀಕ್ಷಣೆಯ ಜತೆಗೆ ಸಂಗೀತ, ಮನರಂಜನಾ ಕಾರ್ಯಕ್ರಮಗಳು ಮತ್ತು ಫುಡ್ ಕೋರ್ಟ್(Food court)ಗಳು ಇರುತ್ತವೆ. ವಿಶೇಷವಾಗಿ ಮಕ್ಕಳಿಗಾಗಿ, ವಿಶೇಷ ಆಟದ ಪ್ರದೇಶಗಳು, ವರ್ಚುವಲ್ ಬ್ಯಾಟಿಂಗ್ ಅನುಭವ, ಬೌಲಿಂಗ್ ನೆಟ್‌ಗಳು ಮತ್ತು ಫೇಸ್ ಪೇಂಟಿಂಗ್ ಕೂಡ ಇರುತ್ತದೆ.
ಏನಿದು ಫ್ಯಾನ್ ಪಾರ್ಕ್?
ರಾಜ್ಯದಲ್ಲಿ ಐಪಿಎಲ್ ಪಂದ್ಯಗಳನ್ನು ನೋಡಬೇಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಬೇಕು. ಇಲ್ಲದಿದ್ದರೆ ಮನೆಯಲ್ಲಿ ಟಿವಿ, ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ಲೈವ್ ನೋಡಬೇಕು. ಎಲ್ಲರಿಗೂ ಬೆಂಗಳೂರಿಗೆ ಹೋಗಿ ಪಂದ್ಯ ವಿಕ್ಷಿಸಲು ಸಾಧ್ಯವಿಲ್ಲ. ಅಂತಹವರಿಗೆ ಫ್ಯಾನ್ ಪಾರ್ಕ್ ನಿರ್ಮಿಸಿ ವಾರಾಂತ್ಯದ ಐಪಿಎಲ್ ಪಂದ್ಯಗಳನ್ನು ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅದಕ್ಕಾಗಿ ದೊಡ್ಡ ಮೈದಾನಗಳಲ್ಲಿ 40*20 ಅಳತೆಯ ಬೃಹತ್ ಡಿಜಿಟಲ್ ಪರದೆ ಅಳವಡಿಸಲಾಗುತ್ತದೆ. ವಿಶಾಲ ಪರದೆ ಮೇಲೆ ಐಪಿಎಲ್ ಕ್ರಿಕೆಟ್ ಪಂದ್ಯ ನೇರ ಪ್ರಸಾರವಾಗಲಿದೆ. ಸಾವಿರಾರು ಅಭಿಮಾನಿಗಳು ಒಂದಡೆ ಸೇರಿ ಕ್ರಿಕೆಟ್ ನೋಡಲು ಫ್ಯಾನ್ ಪಾರ್ಕ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಲ್ಲಿ ಭಾಗವಹಿಸಲು ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ಪ್ರವೇಶವಿರುತ್ತದೆ.
"
ಟಾಟಾ ಐಪಿಎಲ್ ಫ್ಯಾನ್‌ಪಾರ್ಕ್‌ಗೆ ಮತ್ತೊಮ್ಮೆ ಶಿವಮೊಗ್ಗಕ್ಕೆ ಅವಕಾಶ ದೊರೆತಿದೆ. ಎನ್‌ಇಎಸ್ ಮೈದಾನದಲ್ಲಿ ಮೇ 16 ಮತ್ತು 17ರ ಪಂದ್ಯಗಳ ವೀಕ್ಷಣೆಗೆ ಉಚಿತ ಅವಕಾಶವಿದೆ. ಕೆಎಸ್‌ಸಿಎ ಮೈದಾನವನ್ನು ಕೇಳಿದ್ದರು. ಆದರೆ ಇಲ್ಲಿ ಕ್ರಿಕೆಟ್ ತರಬೇತಿ ಶಿಬಿರ ನಡೆಯುತ್ತಿರುವ ಕಾರಣ ಫ್ಯಾನ್ ಪಾರ್ಕ್ ಪಂದ್ಯಗಳ ವೀಕ್ಷಣೆಯನ್ನು ಎನ್‌ಇಎಸ್ ಮೈದಾನಕ್ಕೆ ಟಾಟಾ ಸಂಸ್ಥೆಯೇ ಸ್ಥಳಾಂತರಿಸಿದೆ.
— ಡಿ.ಎಸ್.ಅರುಣ್ , ಶಿವಮೊಗ್ಗ ಕೆಎಸ್‌ಸಿಎ ಸಂಚಾಲಕ