ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ. 
ಶಿವಮೊಗ್ಗ

ಇಂಜಿನಿಯರ್‌ಗೆ ಐ-ಫೋನ್ ಮೋಸ | iPhone scam

ನವೀನ ಬಿ.ಎಂ

ಪ್ರಮುಖ ಮುಖ್ಯಾಂಶಗಳು

  • ದುಬೈನಿಂದ ಕಡಿಮೆ ಬೆಲೆಗೆ ಐ-ಫೋನ್ ಕೊಡಿಸುವುದಾಗಿ ನಂಬಿಸಿ ಮೋಸ
  • ಮಹಿಳಾ ಇಂಜಿನಿಯರ್‌ ಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಸುನೀಲ್
  • ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ದುಬೈನಿಂದ ಕಡಿಮೆ ಬೆಲೆಗೆ ಐ-ಫೋನ್ ಕೊಡಿಸುವುದಾಗಿ ನಂಬಿಸಿ ಮಹಿಳಾ ಇಂಜಿನಿಯರ್‌(Female Engineer)ಗೆ ಲಕ್ಷಾಂತರ ರೂ. ವಂಚಿಸಲಾಗಿದೆ. 
ಮಹಿಳಾ ಇಂಜಿನಿಯರ್‌ಗೆ ಇನ್‌ಸ್ಟಾಗ್ರಾಂ ಮೂಲಕ ಸುನೀಲ್ ಎಂಬಾತನ ಪರಿಚಯವಾಗಿತ್ತು. ಆತ ತಾನು ಕ್ರಷರ್ ಮಾಲೀಕನೆಂದು ಪರಿಚಯಿಸಿಕೊಂಡಿದ್ದ. ದುಬೈನಿಂದ ಕಡಿಮೆ ಬೆಲೆಗೆ ಐ-ಫೋನ್(iPhone) 17 ಪ್ರೊ ಮ್ಯಾಕ್ಸ್ ಮೊಬೈಲ್ ತರಿಸಿಕೊಡುವುದಾಗಿ ನಂಬಿಸಿದ್ದ. 
ಆತನ ಮಾತು ನಂಬಿದ ಇಂಜಿನಿಯರ್, ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಿವಿಧ ಕಂತುಗಳಲ್ಲಿ 1.34 ಲಕ್ಷ ರೂ.ಗಳನ್ನು ಆತನಿಗೆ ಆನ್‌ಲೈನ್ ಮೂಲಕ ಕಳಿಸಿಕೊಟ್ಟಿದ್ದರು. ಆದರೆ ಹಣ ಪಡೆದ ಬಳಿಕ ಆರೋಪಿ ಮೊಬೈಲ್ ಕೊಡಿಸದೆ ನಾನಾ ಸಬೂಬು ಹೇಳಿ ಸತಾಯಿಸಲು ಆರಂಭಿಸಿದ್ದ ಎಂದು ದೂರಲಾಗಿದೆ.
ವಂಚನೆಗೊಳಗಾದ ಇಂಜಿನಿಯರ್ ತಮ್ಮ ಹಣ ವಾಪಸ್ ಕೇಳಿದಾಗ ಆರೋಪಿ ಎರಡು ಕಂತುಗಳಲ್ಲಿ 54 ಸಾವಿರ ರೂ. ಮಾತ್ರ ಹಿಂದಿರುಗಿಸಿದ್ದಾನೆ. ಇನ್ನುಳಿದ 80 ಸಾವಿರ ರೂ. ನೀಡದೆ ವಂಚಿಸಿದ್ದಾನೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆ(Vinobnagar Police Station)ಯಲ್ಲಿ ಪ್ರಕರಣ ದಾಖಲಾಗಿದೆ.