ಶಿವಮೊಗ್ಗ ಸೈಬರ್ ಠಾಣೆ 
ಶಿವಮೊಗ್ಗ

ಟ್ರೇಡಿಂಗ್‌ನಲ್ಲಿ ಹೂಡಿಕೆ, 68.96 ಲಕ್ಷ ರೂ. ವಂಚನೆ | Online fraud

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ಮತ್ತು ಭದ್ರಾವತಿಯ ಉದ್ಯಮಿಗಳಿಬ್ಬರು ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ
  • ಅಲ್ಪಾವಧಿಯಲ್ಲೇ ದೊಡ್ಡ ಮೊತ್ತದ ಲಾಭ ಗಳಿಸಬಹುದೆಂದು ನಂಬಿಸಿ ಮೋಸ
  • ಶಿವಮೊಗ್ಗ ಸೈಬರ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು
ಶಿವಮೊಗ್ಗ: ಪ್ರತ್ಯೇಕ ಪ್ರಕರಣಗಳಲ್ಲಿ ಟ್ರೇಡಿಂಗ್‌(Trading)ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗ ಮತ್ತು ಭದ್ರಾವತಿಯ ಉದ್ಯಮಿ(Businessman)ಗಳಿಬ್ಬರಿಗೆ ಆನ್‌ಲೈನ್ ಮೂಲಕ ಬರೋಬ್ಬರಿ 68.96 ಲಕ್ಷ ರೂ. ವಂಚಿಸಲಾಗಿದೆ.
ಭದ್ರಾವತಿ ನ್ಯೂಟೌನ್‌ನ 45 ವರ್ಷದ ಉದ್ಯಮಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್(WhatsApp) ಮೂಲಕ ಮೆಸೇಜ್ ಮಾಡಿ ಟ್ರೇಡಿಂಗ್ ಕಂಪನಿ ಅಪ್ಲಿಕೇಶನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲೇ ದೊಡ್ಡ ಮೊತ್ತದ ಲಾಭ ಗಳಿಸಬಹುದೆಂದು ಹೇಳಿದ್ದರು. ಅದನ್ನು ನಂಬಿದ ಉದ್ಯಮಿ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 53.10 ಲಕ್ಷ ರೂ. ಹೂಡಿಕೆ ಮಾಡಿದ್ದರು.
ಬಳಿಕ ತಮ್ಮ ಲಾಭಾಂಶ ಮತ್ತು ಅಸಲು ಹಿಂಪಡೆಯಲು ಪ್ರಯತ್ನಿಸಿದಾಗ ಎರಡು-ಮೂರು ದಿನದಲ್ಲಿ ಹಣ ಖಾತೆಗೆ ಜಮಾ ಆಗುವುದಾಗಿ ವಂಚಕ ತಿಳಿಸಿದ್ದ. ಆದರೆ ಕೆಲವು ದಿನಗಳ ನಂತರ ಕಂಪನಿ ಆ್ಯಪ್(Company app) ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಅನುಮಾನಗೊಂಡ ಉದ್ಯಮಿ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. 
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಎಸ್‌ಪಿಎಂ ರಸ್ತೆಯ 38 ವರ್ಷದ ಉದ್ಯಮಿಯನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದ್ದ ವಂಚಕ, ಹಣ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ತಿಳಿಸಿದ್ದ. ಕಂಪನಿ ಹೆಸರಿನ ವೆಬ್‌ಸೈಟ್(website) ತೆರೆದು ಮೊಬೈಲ್ ನಂಬರ್ ಸಹಿತ ಮಾಹಿತಿ ಅಪ್‌ಲೋಡ್ ಮಾಡಿದ್ದರು. ಈ ವೇಳೆ ಕ್ಯೂಆರ್‌ಕೋಡ್ ಕಳುಹಿಸಿದ್ದ ವಂಚಕ 1,210 ರೂ. ವರ್ಗಾವಣೆ ಮಾಡಿ ಶೇರು ಖರೀದಿಸುವಂತೆ ತಿಳಿಸಿದ್ದ. 
ಅದಾದ ಬಳಿಕ 300 ರೂ. ಲಾಭಾಂಶವನ್ನು ಉದ್ಯಮಿ ಖಾತೆಗೆ ಜಮಾ ಮಾಡಿದ್ದ. ಇದನ್ನು ನಂಬಿದ ಉದ್ಯಮಿ 2025ರ ಫೆ.10ರಿಂದ ಡಿ.12ರವರೆಗೆ ಹಂತ ಹಂತವಾಗಿ 15,86,226 ರೂ. ವರ್ಗಾವಣೆ ಮಾಡಿದ್ದರು. ಆದರೆ ಲಾಭಾಂಶ ಕೊಡದೇ ಸತಾಯಿಸುತ್ತಿದ್ದು, ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಈ ಬಗ್ಗೆ ಶಿವಮೊಗ್ಗ ಸೈಬರ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.