ಸೊರಬ ತಾಲೂಕು ಆನವಟ್ಟಿಯಲ್ಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಎಚ್.ಜಯಪ್ಪ ಉದ್ಘಾಟಿಸಿದರು. ಶಂಕರ್ ಶೇಟ್, ಅರುಣ್‌ಕುಮಾರ್, ಎಚ್.ಟಿ.ಕರಿಬಸಪ್ಪ ಇತರರಿದ್ದರು. 
ಶಿವಮೊಗ್ಗ

ಮಕ್ಕಳಿಗೆ ಪುಸ್ತಕಗಳ ಮಹತ್ವ ಪರಿಚಯಿಸಿ

ಸೊರಬ: ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಂಡ ಸಾಮಾನ್ಯನೂ ಮಹಾನ್ ವ್ಯಕ್ತಿಯಾಗಿ ಪರಿವರ್ತನೆ ಆಗಬಲ್ಲ ಎಂದು ನಿವೃತ್ತ ಪ್ರಾಚಾರ್ಯ ಎಚ್.ಜಯಪ್ಪ ಹೇಳಿದರು.
ಆನವಟ್ಟಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಮನೆಗೊಂದು ಗ್ರಂಥಾಲಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿತ್ವ ವಿಕಸನ ಹಾಗೂ ಸಾಧನೆಗೆ ಪುಸ್ತಕಗಳು ಪ್ರೇರಕ ಶಕ್ತಿ. ಮನೆಗೊಂದು ಗ್ರಂಥಾಲಯ ಒಂದು ಶ್ರೇಷ್ಠ ಪರಿಕಲ್ಪನೆಯಾಗಿದ್ದು, ದಿನಕ್ಕೆ ಕನಿಷ್ಠ ಹತ್ತು ಪುಟವಾದರೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಬೇಕು. ಪುಸ್ತಕದ ಮಹತ್ವ ತಿಳಿಸಬೇಕು ಎಂದು ಸಲಹೆ ನೀಡಿದರು.
"

ಪ್ರತಿ ಗ್ರಾಮದಲ್ಲಿ ಗ್ರಂಥಾಲಯ ತೆರೆದರೆ ಗ್ರಂಥಗಳು ಜನಸಾಮಾನ್ಯರಿಗೆ ಹತ್ತಿರವಾಗುತ್ತವೆ. ಗ್ರಂಥಾಲಯಗಳಿಗೆ ಮಕ್ಕಳನ್ನು ಕರೆದೊಯ್ಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅರುಣ್‌ಕುಮಾರ್ಸಾಹಿತಿ

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಮನೆಯಲ್ಲಿ ಅಗತ್ಯ ಕೊಠಡಿಗಳಂತೆ ಗ್ರಂಥಾಲಯ ಕೂಡಾ ಒಂದಾಗಬೇಕು. ತಿಂಗಳಿಗೆ ಎರಡು ಪುಸ್ತಕಗಳನ್ನಾದರೂ ಖರೀದಿಸಿ ಓದುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಡಾ. ಉಮೇಶ್ ಭದ್ರಾಪುರ ಮಾತನಾಡಿ, ಪುಸ್ತಕ ಸಂಸ್ಕೃತಿಯಿಂದ ಯುವಜನರು ದೂರವಾಗುತ್ತಿದ್ದಾರೆ. ಅಧ್ಯಯನದತ್ತ ಆಸಕ್ತಿ ವಹಿಸಬೇಕು ಎಂದರು. ಸಾಹಿತಿ ತು.ಗು.ನಾಗರಾಜ್ ಮಾತನಾಡಿ, ಜೀವನಕ್ಕೆ ಪ್ರಯೋಜನ ನೀಡುವ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದಬೇಕು ಎಂದು ಸಲಹೆ ನೀಡಿದರು.
ಶಿವರುದ್ರಪ್ಪ ಜೋಗಿ ಸ್ವರಚಿತ ಜಾಗೃತಿ ಗೀತೆ ಪ್ರಸ್ತುತಪಡಿಸಿದರು. ಶಿಕ್ಷಕ ಅಶೋಕ್ ತತ್ತೂರು, ಮಂಜುಳಾ ಶೇಟ್ ಭಾವಗೀತೆ ಹಾಡಿದರು. ಉಪನ್ಯಾಸಕ, ಸಾಹಿತಿ ಎಚ್.ಟಿ.ಕರಿಬಸಪ್ಪ, ಸುನಂದಾ, ಕಸಾಪ ಆನವಟ್ಟಿ ಘಟಕದ ಅಧ್ಯಕ್ಷ ಬಸನಗೌಡ, ಗ್ರಂಥಪಾಲಕ ಕೃಷ್ಣಮೂರ್ತಿ, ಉಮೇಶ್ ಬಿಚ್ಚುಗತ್ತಿ, ದೇವರಾಜ್, ಸುನೀತಾ, ವಿಜಯಪ್ರಸಾದ್ ಇತರರಿದ್ದರು.