ಶಿವಮೊಗ್ಗದಲ್ಲಿ ಮಹಿಳಾ ವಸತಿ ನಿಲಯ ಕೌಶಲ ತರಬೇತಿ ಕೇಂದ್ರ ಲೋಕಾರ್ಪಣೆಯ ಸಭಾ ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ವಿನಯಾ ರಘುನಾಥ ರಾಯ್ಕರ್, ಬಲ್ಕೀಶ್ ಬಾನು, ಆರ್.ಪ್ರಸನ್ನಕುಮಾರ್ ಇತರರಿದ್ದರು.
- ಸಚ್ಚಿದಾನಂದ ಜ್ಞಾನೇಶ್ವರ ಶ್ರೀ ಅಭಿಮತ
- ಕೌಶಲ ತರಬೇತಿ ಕೇಂದ್ರ ಉದ್ಘಾಟನೆ
- ದೈವಜ್ಞ ಬ್ರಾಹ್ಮಣ ಮಹಿಳಾ ಮಡಳಿಯಿಂದ ನಿರ್ಮಾಣ
ಶಿವಮೊಗ್ಗ: ಮಹಿಳೆಯರ ಕಾರ್ಯಕ್ಕೆ ಪುರುಷರು ಪ್ರೇರಕ ಶಕ್ತಿಯಾದರೆ ಸ್ತ್ರೀಯರು ಉನ್ನತ (higher) ಸಾಧನೆ ಮಾಡಲು ಸಾಧ್ಯ ಎಂದು ಶ್ರೀ ಕ್ಷೇತ್ರ ಕರ್ಕಿ ಜ್ಞಾನೇಶ್ವರಿ ಪೀಠದ ದೈವಜ್ಞ (daivjna) ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ (swamiji) ತಿಳಿಸಿದರು.
ನಗರದ ಬೊಮ್ಮನಕಟ್ಟೆಯ ಪಾರ್ವತಮ್ಮ ಲೇಔಟ್‌ನಲ್ಲಿ ಸೋಮವಾರ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿಯಿಂದ ನಿರ್ಮಿಸಿರುವ ಮಹಿಳಾ ವಸತಿ ನಿಲಯ ಹಾಗೂ ಕೌಶಲ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮಾತೃಶಕ್ತಿ ಅದ್ಭುತವಾದುದು. ಮಹಿಳೆಯರು ಎಂತಹ ಕಾರ್ಯವನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕೌಶಲ ತರಬೇತಿ ಕೇಂದ್ರವಾಗಿರುವುದೇ ಸೂಕ್ತ ನಿದರ್ಶನ. ಮಹಿಳೆಯರು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕೆ ಪುರುಷರು ಸೂಕ್ತ ಪೋತ್ಸಾಹ ನೀಡಬೇಕು. ಆಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಎರಡು ವರ್ಷಗಳ ಹಿಂದೆ ಈ ತರಬೇತಿ ಕೇಂದ್ರ ಉದ್ಘಾಟನೆ ಆಗಬೇಕಿತ್ತು. ಆದರೆ ಕಾರಣಾಂತರದಿಂದ ಸ್ಪಲ್ಪ ವಿಳಂಬವಾಗಿದೆ. ತಡವಾದರೂ ಮಹತ್ಕಾರ್ಯವೊಂದು ನೆರವೇರಿದೆ ಎಂಬ ತೃಪ್ತಿ ಇದೆ. ಕಟ್ಟಡ ನಿರ್ಮಾಣಕ್ಕೆ ಎಲ್ಲ ಪಕ್ಷದ ಪ್ರಮುಖರು ಒಗ್ಗೂಡಿ ಅಗತ್ಯ ಸಹಕಾರ ನೀಡಿರುವುದು ಶ್ಲಾಘನೀಯ. ಇಲ್ಲಿ ಉತ್ತಮ ಕೌಶಲ ತರಬೇತಿ ಪಡೆದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಲಿ ಎಂದು ಆಶಿಸಿದರು.
ಸಮಾಜ ಎಲ್ಲ ರಂಗಗಳಲ್ಲೂ ಗುರುತಿಸಿಕೊಳ್ಳಲು ವಿದ್ಯೆ ಅವಶ್ಯಕ. ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳ ಆರ್ಥಿಕ ಪ್ರಗತಿಗಾಗಿ ವಿದ್ಯಾನಿಧಿ ಆರಂಭಿಸಿರುವುದು ಅತ್ಯುತ್ತಮ ಕಾರ್ಯ. ಸ್ವಾರ್ಥ ಚಿಂತನೆಗಳು ಹೆಚ್ಚಾಗಿ ದ್ವೇಷ ಭಾವನೆ ಬೆಳೆಯುತ್ತಿರುವುದರಿಂದಲೇ ಯುದ್ಧದಂತಹ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಸೌಹಾರ್ದತೆ, ಉದಾತ್ತ ಸಂಸ್ಕೃತಿಯುಳ್ಳ ಭಾರತೀಯ ಪರಂಪರೆ ವಿಶ್ವಕ್ಕೆ ಮಾದರಿ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕೌಶಲ ತರಬೇತಿ ಕೇಂದ್ರ ಆರಂಭಿಸುವ ಮೂಲಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಸ್ತ್ರೀ ಸಬಲೀಕರಣದತ್ತ ಮಹತ್ವದ ಹೆಜ್ಜೆ ಇರಿಸಿದೆ. ಇಲ್ಲಿ ಕೌಶಲ ಪಡೆದವರು ಉದ್ಯೋಗ ಪಡೆಯಲು ಇಲ್ಲವೇ ಸ್ವಯಂ ಉದ್ಯೋಗ ಆರಂಭಿಸಲು ಸೂಕ್ತ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿಯಿಂದ ಸುಂದರ ಭವನ ನಿರ್ಮಾಣವಾಗಿದೆ. ಮಹಿಳೆಯರು ಸಂಘಟಿತರಾದರೆ ಎಲ್ಲ ಕಾರ್ಯಗಳೂ ಯಶಸ್ವಿಯಾಗುತ್ತವೆ ಎನ್ನುವುದಕ್ಕೆ ಇದು ನಿದರ್ಶನ. ಶಿವಮೊಗ್ಗದ ಜನಪ್ರತಿನಿಧಿಗಳು ರಾಜಕೀಯ ಕಾರಣಗಳನ್ನು ಹೊರತುಪಡಿಸಿ ಸಹಕಾರ ನೀಡಿದ ಪರಿಣಾಮ ಈ ಕಾರ್ಯ ಸಾಕಾರಗೊಂಡಿದೆ ಎಂದರು.
ಸಾಧಕರನ್ನು, ಕಟ್ಟಡಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾನಿಧಿ ವಿತರಿಸಲಾಯಿತು. ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಸ್ಥಾಪಕ ಅಧ್ಯಕ್ಷೆ ವಿನಯಾ ರಘುನಾಥ ರಾಯ್ಕರ್ ಇತರರಿದ್ದರು.
ಸಮಾಜಕ್ಕೆ ಉತ್ತಮ ಕೊಡುಗೆ
ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಮಹಿಳಾ ಮಂಡಳಿಯ ಈಗಿನ ಅಧ್ಯಕ್ಷೆ ವಿನಯಾ ರಾಯ್ಕರ್ ನಗರಸಭೆ ಉಪಾಧ್ಯಕ್ಷೆಯಾಗಿದ್ದರು. ಅವರ ಸತತ ಪರಿಶ್ರಮದಿಂದ ಈ ಕಾರ್ಯ ನೆರವೇರಿದೆ. ಪ್ರಧಾನಿ ರಾಜೀವ್ ಗಾಂಧಿ ಅವರು ಅಂದಿನ ಕಾಲದಲ್ಲೇ ಮಹಿಳೆಯರಿಗೆ ಮೀಸಲಾತಿ ಅವಕಾಶ ಕಲ್ಪಿಸಿದ್ದರಿಂದ ಅವರು ನಗರಸಭೆ ಉಪಾಧ್ಯಕ್ಷೆಯಾಗಿದ್ದರು. ಈಗ ಸಮಾಜದ ಮಹಿಳೆಯರಿಗೆ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ಸ್ಥಾಪನೆ ಮಾಡಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಶ್ಲಾಘಿಸಿದರು.
ಮೈಸೂರು ವಿವಿ ವಿಶ್ರಾಂತ ಕುಲಪತಿ ಸುಧಾ ರಾವ್ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಶಿವಮೊಗ್ಗದ ಚಿತ್ರಣವೇ ಬದಲಾಗಿದೆ. ರಾಜ್ಯ ಭೂಪಟದಲ್ಲಿ ಶಿವಮೊಗ್ಗಕ್ಕೆ ಮಹತ್ವದ ಸ್ಥಾನ ದೊರೆಯಿತು. ದೈವಜ್ಞ ಸಮಾಜದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರೆಲ್ಲರಿಗೂ ಈ ಕಟ್ಟಡದ ಪ್ರಯೋಜನ ದೊರೆಯುವಂತಾಗಲಿ ಎಂದರು.