ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ಮೊದಲ ಬಾರಿಗೆ ಲ್ಯಾಂಡ್ ಆಗಿದ್ದ ಸಂದರ್ಭ.
- ಬೆಂಗಳೂರು-ಶಿವಮೊಗ್ಗ ಮಾರ್ಗದ ಸೇವೆ ಬಂದ್
- ಕೆಎಸ್‌ಐಡಿಸಿಗೆ ಪತ್ರ ಬರೆದ ಆಡಳಿತ ಮಂಡಳಿ
- 2023ರ ಆಗಸ್ಟ್‌ನಲ್ಲಿ ಮೊದಲ ಸಂಚಾರ
ಶಿವಮೊಗ್ಗ; ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ವಾಯುಸೇವೆ ಕಲ್ಪಿಸುತ್ತಿರುವ ಶಿವಮೊಗ್ಗ (shivamogga) ಏರ್‌ಪೋರ್ಟ್(airport) ನಲ್ಲಿ ಮೊದಲು ಹಾರಾಟ ಆರಂಭಿಸಿದ್ದ ಶಿವಮೊಗ್ಗ-ಬೆಂಗಳೂರಿನ ನಡುವಿನ ಇಂಡಿಗೋ (indigo)ವಿಮಾನ ಮೇ 1ರಿಂದ ಅಕ್ಟೋಬರ್‌ವರೆಗೆ ಸೇವೆ ಸ್ಥಗಿತಗೊಳಿಸುತ್ತಿದೆ. ಇದರೊಂದಿಗೆ ಅತ್ಯಂತ ಲಾಭದಾಯಕ ಹಾಗೂ ಅಗತ್ಯವಾಗಿದ್ದ ಮಾರ್ಗದಲ್ಲೇ ವಿಮಾನ ಸಂಚಾರ ಇಲ್ಲದಂತಾಗಿದೆ.
2023ರ ಆ.31ರಂದು ಮೊದಲ ಬಾರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಾರಿ ಬಂದ ಇಂಡಿಗೋ ವಿಮಾನದ ಸ್ವಾಗತಕ್ಕೆ ನೂರಾರು ಜನರು ಸಾಕ್ಷಿಯಾಗಿದ್ದರು. ಅಂದಿನಿಂದ ಇಂದಿನವರೆಗೆ ಈ ವಿಮಾನ ಸಾವಿರಾರು ಪ್ರಯಾಣಿಕರನ್ನು ಹೊತ್ತು ಸಾಗಿತ್ತು. ಇದೀಗ ಶಿವಮೊಗ್ಗ ಏರ್‌ಪೋರ್ಟ್ ಪಾಲಿಗೆ ಇಂಡಿಗೋ ಸಂಚಾರ ಸೇವೆ ನಿಲ್ಲಿಸಿದೆ.
ಅಕ್ಟೋಬರ್‌ವರೆಗೆ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಇಂಡಿಗೋ ಆಡಳಿತ ಮಂಡಳಿ ಅಧಿಕೃತವಾಗಿ ಕೆಎಸ್‌ಐಡಿಸಿ (ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ)ಗೆ ಪತ್ರ ಬರೆದಿದೆ. ಅಕ್ಟೋಬರ್ ಬಳಿಕ ಮತ್ತೆ ಸೇವೆ ಆರಂಭಿಸಲಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅಲ್ಲಿಯವರೆಗೆ ಮಾತ್ರ ಈ ವಿಮಾನ ಹಾರುವುದಿಲ್ಲ ಎಂಬುದು ನಿಶ್ಚಿತ.
ಇಂಡಿಗೋ ದೇಶದೊಳಗೆ ಅನೇಕ ನಗರಗಳಿಗೆ ನೀಡುತ್ತಿದ್ದ ಸೇವೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಡಿಜಿಸಿಎ ವಿಧಿಸಿದ ಷರತ್ತು ಪೂರೈಸುವುದು ಹೊರೆಯಾಗಿರುವುದೇ ಇದಕ್ಕೆ ಕಾರಣ. ಮುಖ್ಯವಾಗಿ ಸಿಬ್ಬಂದಿ ವಿಚಾರದಲ್ಲಿನ ಷರತ್ತು ಆ ಸಂಸ್ಥೆಗೆ ಹೊರೆಯಾಗಿತ್ತು. ಷರತ್ತು ಪೂರೈಸಲು ಮುಂದಾದರೆ ಆರ್ಥಿಕ ಹೊರೆ ಉಂಟಾಗುತ್ತದೆ. ಷರತ್ತು ಪೂರೈಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಎರಡು ಅಲುಗಿನ ಕತ್ತಿಯಲ್ಲಿ ಇಂಡಿಗೋ ಸಿಲುಕಿಕೊಂಡಿತ್ತು. ಅದರಿಂದ ಹೊರಬರಲು ಸೇವೆ ಸ್ಥಗಿತದ ತೀರ್ಮಾನಕ್ಕೆ ಬಂದಿದೆ.
ಎಲ್ಲ ಸಿಬ್ಬಂದಿ ಶಿಫ್ಟ್
ಇಂಡಿಗೋ ವಿಮಾನ ಗುರುವಾರ ಶಿವಮೊಗ್ಗದಿಂದ ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಈ ಏರ್‌ಪೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಡಿಗೋದ ಎಲ್ಲ 37 ಸಿಬ್ಬಂದಿಯನ್ನು ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಏರ್‌ಪೋರ್ಟ್‌ಗಳಿಗೆ ಸ್ಥಳಾಂತರಿಸಲಾಗಿದೆ. ಇದರಲ್ಲಿ ಕೆಲ ಸಿಬ್ಬಂದಿ ಸ್ಥಳೀಯರೂ ಆಗಿದ್ದರು. ಮನೆ ಬಾಗಿಲಲ್ಲಿ ಕೆಲಸ ಮಾಡುತ್ತಿದ್ದ ಅವರೆಲ್ಲರೂ ಈಗ ಅನಿವಾರ್ಯವಾಗಿ ಬೇರೆ ಕಡೆ ಹೋಗುವಂತಾಯಿತು.
ಒಂದೂವರೆ ಕೋಟಿ ರೂ. ನಷ್ಟ
ಶಿವಮೊಗ್ಗ-ಬೆಂಗಳೂರು ನಡುವಿನ ಇಂಡಿಗೋ ವಿಮಾನ ಎಂದೂ ನಷ್ಟದ ಹಾದಿಗೆ ಹೋಗಿರಲಿಲ್ಲ. ಪ್ರತಿ ಟ್ರಿಪ್‌ನಲ್ಲೂ ಶೇ. 75-80ರಷ್ಟು ಪ್ರಯಾಣಿಕರು ಇರುತ್ತಿದ್ದರು. ಒಂದು ವರ್ಷ ರಾಜ್ಯ ಸರ್ಕಾರದ ಸಹಾಯಧನದಿಂದ ಕಾರ್ಯನಿರ್ವಹಿಸಿ ಈ ವಿಮಾನ ನಂತರ ಸರ್ಕಾರದ ಬಳಿ ಸಹಾಯ ಕೋರಿರಲಿಲ್ಲ. ಬದಲಿಗೆ ಇಂಡಿಗೋ ಕಂಪನಿಯೇ ಸರ್ಕಾರಕ್ಕೆ ಆದಾಯ ನೀಡುತ್ತಿತ್ತು. ಏರ್‌ಪೋರ್ಟ್ ಬಳಕೆಯ ಶುಲ್ಕವಾಗಿ ಪ್ರತಿ ಪ್ರಯಾಣಿಕರ ಪಾಲು 750 ರೂ.ಅನ್ನು ಕೆಎಸ್‌ಐಡಿಸಿಗೆ ಇಂಡಿಗೋ ಪಾವತಿ ಮಾಡುತ್ತಿತ್ತು. ವಾರ್ಷಿಕ ಇದರ ಒಟ್ಟು ಮೌಲ್ಯ 1.50 ಕೋಟಿ ರೂ. ಆಗುತ್ತಿತ್ತು. ಈಗ ಇಂಡಿಗೋ ಸಂಚಾರ ಸ್ಥಗಿತವಾಗುವ ಜತೆಗೆ ಸರ್ಕಾರಕ್ಕೆ ಆದಾಯವೂ ನಿಂತಿದೆ.
ಬೇರೆ ಕಂಪನಿಯೊಂದಿಗೆ ಮಾತುಕತೆ
ಶಿವಮೊಗ್ಗ-ಬೆಂಗಳೂರು ನಡುವಿನ ಇಂಡಿಗೋ ವಿಮಾನ ಸೇವೆ ಉಳಿಸಿಕೊಳ್ಳಲು ಎಲ್ಲ ರೀತಿ ಪ್ರಯತ್ನ ಮಾಡಿದರೂ ಅದು ಫಲ ನೀಡಿಲ್ಲ. ಆದರೆ ಆಶಾಭಾವನೆ ಕುಂದಿಲ್ಲ. ಪ್ರಯತ್ನ ಮುಂದುವರಿದಿದೆ. ಬೇರೆ ವಿಮಾನ ಸಂಸ್ಥೆಗಳೊಂದಿಗೂ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಶುಭ ಸುದ್ದಿ ಬರಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಬೇರೆ ವಿಮಾನಯಾನ ಕಂಪನಿಗಳೊಂದಿಗೆ ಮಾತನಾಡಿ ಸೇವೆ ಒದಗಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸ್ವಲ್ಪ ದಿನದಲ್ಲೇ ಎಲ್ಲವೂ ಸರಿಯಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದೊಳಗೆ ಸಂಚರಿಸುವ ವಿಮಾನಗಳು ಉಡಾನ್ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿವಮೊಗ್ಗ-ಬೆಂಗಳೂರು ನಡುವಿನ ವಿಮಾನ ಹಾರಾಟಕ್ಕೆ ಪ್ರತಿ ಸೀಟಿಗೆ ಇಂಡಿಗೂ ಕಂಪನಿಗೆ 500 ರೂ. ರಾಜ್ಯ ಸರ್ಕಾರದಿಂದ ನೀಡುತ್ತಿದ್ದರು. ಇದರಿಂದ ಪ್ರಯಾಣಿಕರಿಗೂ ಹೊರೆಯಾಗಲಿಲ್ಲ. ವಿಮಾನ ಕಂಪನಿಗೂ ನಷ್ಟವಾಗಲಿಲ್ಲ. ಆದರೆ ಈಗ ರಾಜ್ಯ ಸರ್ಕಾರ ಹಣ ನೀಡಲು ಸಿದ್ಧವಿಲ್ಲ. ಜತೆಗೆ ಡಿಜಿಸಿಎ ನಿಯಮಾವಳಿಗಳನ್ನೂ ಭರಿಸುವ ಪೂರ್ಣ ಸಾಮರ್ಥ್ಯವೂ ಇಂಡಿಗೋ ಕಂಪನಿಗೆ ಇಲ್ಲ. ಹೀಗಾಗಿ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸುತ್ತಿದ್ದಾರೆ ಎಂದರು.
ಈಗಾಗಲೇ ಅನೇಕ ಏರ್‌ಪೋರ್ಟ್‌ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲಾಗಿದೆ. ಒಂದು ವೇಳೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನಿರ್ವಹಣೆಯ ಹೊಣೆ ನೀಡಲು ಸಾಧ್ಯವಾಗದೆ ಇದ್ದರೆ ಯಾವುದಾದರೂ ಖಾಸಗಿ ಕಂಪನಿಗೆ ವಹಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ನಿರ್ವಹಣೆ ವ್ಯವಸ್ಥೆ ಬದಲಾಗಲಿ
ಮೂರು ವರ್ಷದಲ್ಲಿ ವ್ಯತಿರಿಕ್ತ ಹವಾಮಾನದ ಪರಿಣಾಮ ವಿಮಾನ ಲ್ಯಾಂಡ್ ಆಗದೇ ಬೆಂಗಳೂರಿಗೆ ಮರಳಿದ ಘಟನೆ ಅನೇಕ ಬಾರಿ ನಡೆದಿದೆ. ಇದರಿಂದ ಇಂಡಿಗೋ ಕಂಪನಿಗೂ ನಷ್ಟವಾಗುತ್ತಿತ್ತು. ನೈಟ್ ಲ್ಯಾಂಡಿಂಗ್ ಉಪಕರಣ ಅಳವಡಿಕೆಗೆ ಕೆಎಸ್‌ಐಡಿಸಿ ವಿಳಂಬನೀತಿ ಅನುಸರಿಸುತ್ತಿದೆ. ಕೆಎಸ್‌ಐಡಿಸಿ ಬಳಿ ಇರುವ ಏರ್‌ಪೋರ್ಟ್ ನಿರ್ವಹಣೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನೀಡಬೇಕು ಎಂದು ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.