ಶಿವಮೊಗ್ಗ ಮಲ್ಲಿಗೇನಹಳ್ಳಿಯ ಸನ್ನಿಧಿ ಚರ್ಚ್ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ‘ನಾನು ವಿಜ್ಞಾನಿ’ ತರಬೇತಿ ಕಾರ್ಯಾಗಾರವನ್ನು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್‌ಕುಮಾರ್ ಉದ್ಘಾಟಿಸಿದರು. ಎನ್.ಹೇಮಂತ್, ಕೆ.ಆರ್.ಸುಜತಾ, ಫಾದರ್ ಪಿಂಟೋ ಇತರರಿದ್ದರು. 
ಶಿವಮೊಗ್ಗ

ಬಾಹ್ಯಾಕಾಶದಲ್ಲಿ ಭಾರತ ಹೊಸ ಹೆಜ್ಜೆ | scientist workshop

ನವೀನ ಬಿ.ಎಂ

ಪ್ರಮುಖ ಮುಖ್ಯಾಂಶಗಳು

  • ಪ್ರಗತಿ ಮತ್ತು ನಾವೀನ್ಯತೆಯ ಹಿಂದಿನ ಪ್ರೇರಕ ಶಕ್ತಿ ವಿಜ್ಞಾನ
  • ಶಿವಮೊಗ್ಗದಲ್ಲಿ ನಾನು ವಿಜ್ಞಾನಿ ತರಬೇತಿ ಕಾರ್ಯಾಗಾರ
  • ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್‌ಕುಮಾರ್ ಶ್ಲಾಘನೆ
ಶಿವಮೊಗ್ಗ: ಬಾಹ್ಯಾಕಾಶ(Space)ದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆ(Artificial Intelligence) ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಭಾರತ ಹೊಸ ಹೆಜ್ಜೆ ಇಟ್ಟಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಕೈಜೋಡಿಸಿದೆ ಎಂದು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಡಾ. ಎ.ಎಸ್.ಕಿರಣ್‌ಕುಮಾರ್ ಹೇಳಿದರು.
ಸಾಗರ ರಸ್ತೆಯ ಮಲ್ಲಿಗೇನಹಳ್ಳಿಯ ಸನ್ನಿಧಿ ಚರ್ಚ್(Sannidhi Church) ಇನ್‌ಸ್ಟಿಟ್ಯೂಟ್ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ನಿಂದ ಸೋಮವಾರ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಹಾಗೂ ಜಿಲ್ಲೆಯ ಗ್ರಾಪಂಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ‘ನಾನು ವಿಜ್ಞಾನಿ(scientist)’ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನೆಲ, ಜಲ ಮತ್ತು ಆಹಾರದ ವಿಷಯಗಳಲ್ಲಿ ಸ್ವಾಮ್ಯತ್ವ ಸಾಧನೆಗೆ ವಿಜ್ಞಾನಿಗಳು ಮುಂದಾಗಿದ್ದು, ಅದರಿಂದ ಮಾತ್ರ ಈ ವ್ಯವಸ್ಥೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದರು.
ಬಾಹ್ಯಾಕಾಶದಲ್ಲಿ ನಾವೀನ್ಯ ಸಂಶೋಧನೆ(Innovative research)ಗಳಿಗೆ ಒಂದು ಟ್ರಿಲಿಯನ್ ಅಥವಾ 5 ಟ್ರಿಲಿಯನ್(Trillion) ಆರ್ಥಿಕತೆ ಸಾಧಿಸಬೇಕಾಗುತ್ತದೆ. ಅದಕ್ಕೆ ಸರ್ಕಾರ ಮಾತ್ರ ಕೈಜೋಡಿಸಿದರೆ ಸಾಲದು. ಖಾಸಗಿ ಸಂಸ್ಥೆಗಳೂ ಕೈಜೋಡಿಸಿದಾಗ ಬಾಹ್ಯಾಕಾಶದಲ್ಲಿ ಭಾರತ ತನ್ನ ಸ್ವಾಮ್ಯತ್ವ ಸ್ಥಾಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.ಜಗತ್ತನ್ನು ರೂಪಿಸುವ, ಪ್ರಗತಿ ಮತ್ತು ನಾವೀನ್ಯತೆಯ ಹಿಂದಿನ ಪ್ರೇರಕ ಶಕ್ತಿ ವಿಜ್ಞಾನ. ನೂತನ ಆವಿಷ್ಕಾರಗಳಿಂದ ಜನರಿಗೆ ಆಧುನಿಕ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಅವರ ಜೀವನ ವಿಧಾನದಲ್ಲಿ ಗಣನೀಯ ಬದಲಾವಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
‘ನಾನು ವಿಜ್ಞಾನಿ’ ರಾಜ್ಯದಲ್ಲೇ ವಿನೂತನ ಪ್ರಯೋಗ
ಶಿವಮೊಗ್ಗ ಮುಂದುವರಿದ ಜಿಲ್ಲೆಯಾದರೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೌಢ್ಯ, ಬಾಲ್ಯವಿವಾಹ ಪದ್ಧತಿಗಳಿವೆ. ಹಾಗಾಗಿ ವೈಜ್ಞಾನಿಕವಾಗಿ ಆಲೋಚನೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ‘ನಾನು ವಿಜ್ಞಾನಿ’ ಎಂಬ ವಿನೂತನ ಪ್ರಯೋಗ(Innovative experiment) ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು. ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ದೆವ್ವದ ನೆಪದಲ್ಲಿ ದೇವಸ್ಥಾನದಲ್ಲಿ ಇರಿಸಿದ್ದರು. ಅದನ್ನು ನೋಡಿ ಅಚ್ಚರಿ ಮತ್ತು ಆತಂಕವೂ ಆಯಿತು. ಹಾಗಾಗಿ ಮೌಢ್ಯ, ಕಂದಾಚಾರ, ಅವೈಜ್ಞಾನಿಕ ವಿಷಯಗಳನ್ನು ಜನಮಾನಸದಿಂದ ಹೊರಹಾಕುವುದು, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ನಿವಾರಿಸಿ, ಖಚಿತವಾದ ವಿಷಯಗಳನ್ನು ಜನರಿಗೆ ತಲುಪಿಸಲು ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಸನ್ನಿಧಿ ಚರ್ಚ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಫಾದರ್ ಪಿಂಟೋ ಉಪಸ್ಥಿತರಿದ್ದರು.

 ನಾನು ವಿಜ್ಞಾನಿ ವಿನೂತನ ಕಲ್ಪನೆ

ನಾನು ವಿಜ್ಞಾನಿ ಎಂಬ ಕಲ್ಪನೆಯೊಂದಿಗೆ ಸನ್ನಿಧಿ ಚರ್ಚ್‌ನಲ್ಲಿ 40 ದೂರದರ್ಶಕಗಳನ್ನು ಗ್ರಂಥಾಲಯ ಮೇಲ್ವಿಚಾರಕರೇ ಸಿದ್ಧಪಡಿಸಿದ್ದಾರೆ. ಜಿಲ್ಲೆಯಲ್ಲಿ 162 ಗ್ರಾಪಂಗಳಿದ್ದು, ಅದರಲ್ಲಿ ಮೊದಲ ಹಂತದಲ್ಲಿ 80 ಗ್ರಂಥ ಮೇಲ್ವಿಚಾರಕರಿಗೆ ಬಿಜಿಬಿಎಸ್ ಸಂಸ್ಥೆಯಿಂದ ಐದು ದಿನಗಳ ತರಬೇತಿಯನ್ನು ಭಾನುವಾರ(ಮಾ.1)ದಿಂದಲೇ ನೀಡಲಾಗುತ್ತಿದೆ. ಮುಂದಿನ ದಿನಗಳಲಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಲಾ ಮಕ್ಕಳು, ಜನರಿಗೆ ದೂರದರ್ಶಕದ ಮೂಲಕ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸುವುದಾಗಿದೆ.