ಹೆಗ್ಗೋಡಿನ ವಿಸಂ ಶಿಕ್ಷಣ ಸಂಸ್ಥೆಯ ರೂಪಶ್ರೀ ಕಾಲೇಜಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಪ್ರಸನ್ನ ಕೆರೆಕೈ, ನಾಗರಾಜ್ ಸಭಾಹಿತ್, ಎಂ.ಎಸ್.ನಾಗರಾಜ್, ಬಾಗಿ ಸತ್ಯನಾರಾಯಣ, ವಿಠ್ಠಲ ಪೈ ಇತರರಿದ್ದರು. 
ಶಿವಮೊಗ್ಗ

ಭಾರತದ ಸಂಸ್ಕೃತಿ ಅನುಕರಣೀಯ | Student Forum

ತ್ಯಾಗರ್ತಿ (ಸಾಗರ ತಾ.): ಜಗತ್ತಿನಲ್ಲಿ ಭಾರತ ವೈವಿಧ್ಯಮಯ ಸಂಪ್ರದಾಯ, ಸಂಸ್ಕೃತಿ, ಆಚರಣೆಗಳಿಂದ ಕೂಡಿದ ದೇಶ. ನಾವು ನದಿ, ಮರ, ಬೆಂಕಿ, ನೀರನ್ನು ಪೂಜಿಸುತ್ತೇವೆ. ನಮ್ಮ ಉದಾತ್ತ ಚಿಂತನೆಗಳು ಅನುಕರಣೀಯ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಾಗರ ತಾಲೂಕಿನ ಕೇಡಲಸರದಲ್ಲಿ ಬುಧವಾರ ಕೇಡಲಸರ-ಹೆಗ್ಗೋಡು ವಿದ್ಯಾಭಿವೃದ್ಧಿ ಸಂಘ ಮತ್ತು ಎಸ್.ರೂಪಶ್ರೀ ಪದವಿಪೂರ್ವ ಕಾಲೇಜಿನ ಸಮನ್ವಯ ವಿದ್ಯಾರ್ಥಿ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿ ವರ್ಷ ಹಾವು ಕಚ್ಚಿ 26 ಸಾವಿರ ಜನರು ಸಾಯುತ್ತಿದ್ದಾರೆ ಎನ್ನುವ ವರದಿಯಿದ್ದರೂ ನಾವು ಹಾವನ್ನು ಪೂಜಿಸುತ್ತೇವೆ. ನಮ್ಮಲ್ಲಿನ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಬೇಕು. ಭಾರತಕ್ಕೆ ಸ್ವಾತಂತ್ರೃ ಲಭಿಸಿದ 1947ರಲ್ಲಿ ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಶೇ.11ರಷ್ಟು ಇತ್ತು ಎಂದು ಬ್ರಿಟಿಷರು ದಾಖಲಿಸಿದ್ದಾರೆ. ಇದರ ಜತೆಗೆ ಭಾರತ ವಿಭಜನೆಯಾಗಲು ಭಾರತದೊಳಗಿನ ಐಕ್ಯತೆ ಕೊರತೆಯೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಒಗ್ಗಟ್ಟಿನ ಕೊರತೆಯಿಂದ ಇತರರು ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಾಗಬಹುದು. ಹಾಗಾಗಿ ವಿದ್ಯಾರ್ಥಿಗಳು, ಯುವಜನರು ಸಂಘಟನಾತ್ಮಕ ಮನೋಸ್ಥಿತಿ ಹೊಂದಿರಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ಕೇಡಲಸರ ವಿದ್ಯಾಭಿವೃದ್ಧಿ ಸಂಘ ಐದು ದಶಕಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಕ್ಕಳಿಗೆ ಶಿಕ್ಷಣದ ಜತೆ ವ್ಯಕ್ತಿತ್ವ ನಿರ್ಮಾಣದಂತಹ ಪೂರಕ ಚಟುವಟಿಕೆಗಳನ್ನು ನೀಡುತ್ತಿದೆ. ಸಮೂಹ ನಾಯಕತ್ವ, ಪರಿಸರ ಕಾಳಜಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯಂತಹ ವಿವಿಧ ಕಾರ್ಯಕ್ರಮ ನಿರೂಪಿಸುತ್ತಿದೆ ಎಂದು ಹೇಳಿದರು.
ಕಾಲೇಜಿನ ವಿದ್ಯಮಾನಗಳ ಕುರಿತು ಸ್ವಯಂಪ್ರಭಾ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ನಾಗರಾಜ್ ಸಭಾಹಿತ್, ಎಂ.ಎಸ್.ನಾಗರಾಜ್, ಬಾಗಿ ಸತ್ಯನಾರಾಯಣ, ವಿಠ್ಠಲ ಪೈ, ಪ್ರಾಚಾರ್ಯ ಎಂ.ಎಂ.ತಿಮ್ಮಪ್ಪ, ಉಪನ್ಯಾಸಕಿ ಅರ್ಚನಾ, ಪೂರ್ಣಿಮಾ, ವಿಷ್ಣುಮೂರ್ತಿ ಇತರರಿದ್ದರು.