ಹೊಸನಗರದಲ್ಲಿ ಶಿಬಿರಾರ್ಥಿಗಳಿಗೆ ಪಪಂ ಮುಖ್ಯಾಧಿಕಾರಿ ಎಂ.ಎನ್.ಹರೀಶ್ ಉಚಿತವಾಗಿ ಆಯುರ್ವೇದ ಔಷಧ ವಿತರಿಸಿದರು. ಡಾ. ಪತಂಜಲಿ, ಶಾಂತಕುಮಾರ್, ಜಿ.ಎಂ.ಹರೀಶ್ ಇತರರಿದ್ದರು.
ಹೊಸನಗರ: ಆಯುರ್ವೇದ ಚಿಕಿತ್ಸೆಯು ಭಾರತದಲ್ಲಿ ಪ್ರಾಚಿನ ಕಾಲದಿಂದಲೂ ಬಳಕೆಯಲ್ಲಿರುವ ಸಾಂಪ್ರದಾಯಿಕ ವೈದ್ಯ ಪದ್ಧತಿ ಎಂದು ಆಯುರ್ವೇದ ವೈದ್ಯ ಪತಂಜಲಿ ತಿಳಿಸಿದರು.
ಪಟ್ಟಣದ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಆಯುಷ್ ವಿಭಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಟೋ ಚಾಲಕರ ಸಂಘದಿಂದ ಆಯೋಜಿಸಿದ್ದ ಆಯುಷ್ ವಿಶೇಷ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೋಗಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವುದು ಆಯುರ್ವೇದ ಚಿಕಿತ್ಸೆಯ ಪ್ರಮುಖ ಗುರಿ. ಈ ಪದ್ಧತಿಯಲ್ಲಿ ಕೇವಲ ಔಷಧವಲ್ಲದೆ ಆಹಾರ ಪದ್ಧತಿ, ಜೀವನ ಶೈಲಿ, ವ್ಯಾಯಾಮ ಹಾಗೂ ಚಿಕಿತ್ಸಾ ವಿಧಾನಕ್ಕೂ ಮಹತ್ವ ನೀಡಲಾಗಿದೆ. ಆದರೆ ಸ್ವಯಂ ರೋಗ ನಿರ್ಣಯ, ಔಷಧ ಸೇವನೆ ಆರೋಗ್ಯಕ್ಕೆ ಮಾರಕ ಎಂದು ಎಚ್ಚರಿಸಿದರು.
ಪಪಂ ಮುಖ್ಯಾಧಿಕಾರಿ ಎಂ.ಎನ್.ಹರೀಶ್ ಮಾತನಾಡಿ, ಸರ್ಕಾರದ ಹಲವು ಉಚಿತ ಶಿಬಿರಗಳ ಸದ್ದುದೇಶವನ್ನು ಸಾರ್ವಜನಿಕರು ಅರಿತು ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆಸ್ಪತ್ರೆ ವೈದ್ಯ ಶಾಂತಕುಮಾರ್, ಆಯುಷ್ ವೈದ್ಯರಾದ ಜಿ.ಎಂ.ಹರೀಶ್, ಪ್ರತಿಮಾ, ಪ್ರದೀಪ್, ಸುಷ್ಮಾ ಹೆಬ್ಬಾರ್ ಇತರರಿದ್ದರು.
ಶಿಬಿರಾರ್ಥಿಗಳಿಗೆ ರಕ್ತದೊತ್ತಡ, ಮಧುಮೇಹ, ಸಂದು ಕೀಲುಗಳ ನೋವು, ಚರ್ಮದ ಕಾಯಿಲೆ, ಅಲರ್ಜಿ, ಕೆಮ್ಮ, ಉಸಿರಾಟದ ಸಮಸ್ಯೆ, ಸ್ತ್ರೀರೋಗ ಸೇರಿ ಇತರೆ ಕಾಯಿಲೆಗಳ ತಪಾಸಣೆ, ಚಿಕಿತ್ಸೆ ನೀಡಿ ಉಚಿತ ಔಷಧ ವಿತರಿಸಲಾಯಿತು.