ಶಿವಮೊಗ್ಗ ಡಿಎಆರ್ ಸಭಾಂಗಣದಲ್ಲಿ ಎಲ್‌ಎಚ್‌ಬಿಎಸ್ ಪೋಸ್ಟರ್‌ಗಳನ್ನು ಎಸ್‌ಪಿ ಬಿ.ನಿಖಿಲ್ ಬಿಡುಗಡೆಗೊಳಿಸಿದರು. ಎಎಸ್‌ಪಿ ಎ.ಜಿ.ಕಾರಿಯಪ್ಪ, ಡಿವೈಎಸ್‌ಪಿ ಬಾಬು ಅಂಜನಪ್ಪ, ಇನ್ಸ್‌ಪೆಕ್ಟರ್‌ಗಳಾದ ಹರೀಶ್ ಪಟೇಲ್, ರವಿ ಪಾಟೀಲ್ ಇದ್ದರು. 
ಶಿವಮೊಗ್ಗ

ಜಿಲ್ಲೆಯಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಅನುಷ್ಠಾನ | LHBS

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ಆರಕ್ಷಕ ಇಲಾಖೆಯಿಂದ ನೂತನ ಕ್ರಮ
  • ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ ಜಾರಿ
  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾಹಿತಿ
ಶಿವಮೊಗ್ಗ: ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಶುಕ್ರವಾರದಿಂದಲೇ ಲಾಕ್ಡ್ ಹೌಸ್ ಬೀಟ್ ಸಿಸ್ಟಂ(ಎಲ್‌ಎಚ್‌ಬಿಎಸ್)(Locked House Beat System) ಅನುಷ್ಠಾನಕ್ಕೆ ತಂದಿದೆ. ನೀವು ಊರಿನಿಂದ ಹೊರಹೋಗುವ ಮತ್ತು ಬರುವ ದಿನವನ್ನು ವಾಟ್ಸ್‌ಆ್ಯಪ್‌ನಲ್ಲೇ ಮಾಹಿತಿ ನೀಡಿ, ಮನೆ ಮುಂದೆ ನಿಂತು ನಿಮ್ಮದೊಂದು ಸೆಲ್ಫಿ ಹಾಕಿದರೆ ನಿಶ್ಚಿಂತೆಯಿಂದ ಪ್ರಯಾಣ ಮುಗಿಸಿ ಬರಬಹುದು.
ಕುಟುಂಬ ಸಮೇತ ಪ್ರವಾಸ ಅಥವಾ ಸಮಾರಂಭಗಳಿಗೆ ಕಳ್ಳರ ಭಯದಿಂದಾಗಿ ಹೊರಹೋಗಲು ಹಿಂದೇಟು ಹಾಕುವಂತಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ(Innovative Project
) ಜಾರಿಗೊಳಿಸಿದೆ ಎಂದು ಎಸ್‌ಪಿ ಬಿ.ನಿಖಿಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾಟ್ಸ್‌ಆ್ಯಪ್ ಬಳಕೆದಾರರಾಗಿದ್ದಲ್ಲಿ ಕ್ಯೂಆರ್ ಕೋಡ್(QR code) ಸ್ಕ್ಯಾನ್ ಮಾಡುವುದು ಅಥವಾ 8277982901ಗೆ ‘ಹಾಯ್’ ಎಂದು ಸಂದೇಶ ಕಳುಹಿಸಿದರೆ ಸಾಕು. ಮೂರು ಹಂತದಲ್ಲಿ ಮಾಹಿತಿ ಪಡೆದು ನಿಮ್ಮ ಮನೆಗಳ ಸುರಕ್ಷತೆಗೆ ಒತ್ತು ನೀಡಲಾಗುವುದು. ನೀವು ಬರುವರೆಗೂ ನಿಮ್ಮ ಮನೆಗಳನ್ನು ಕಾಯುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆ ವಿಳಾಸ ಮತ್ತು ಲೋಕೇಶನ್(Location), ಮನೆ ಮುಂದಿನ ಸೆಲ್ಫಿ ಫೋಟೊವನ್ನು ವಾಟ್ಸ್‌ಆ್ಯಪ್ ಮಾಡಿದರೆ ಪ್ರತಿದಿನವೂ ನಮ್ಮ ಸಿಬ್ಬಂದಿ ನಿಗಾ ಇಡುವರು. ನೀವು ಬರುವುದು ಒಂದು ದಿನ, ತಿಂಗಳು, ಎರಡ್ಮೂರು ತಿಂಗಳಾದರೂ ಪೊಲೀಸ್ ಸಿಬ್ಬಂದಿ ಮನೆ ಸುರಕ್ಷೆಗೆ ಒತ್ತು ನೀಡುವರು ಎಂದರು.

ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ

ಕೆಲವೊಮ್ಮೆ ಮನೆ ಮಾಲೀಕರು 20 ದಿನಕ್ಕಿಂತ ಮೇಲ್ಪಟ್ಟು ತೆರಳಿದರೆ ಆ ಮನೆಗಳಿಗೆ ಸಿಸಿ ಕ್ಯಾಮರಾ(cc camara) ಅಳವಡಿಕೆ ಬಗ್ಗೆಯೂ ಚಿಂತನೆ ನಡೆದಿದೆ. ಮನೆಯಿಂದ ತೆರಳುವ ಮುನ್ನ ಮಾಲೀಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ಕ್ಯಾಮರಾ ಅಳವಡಿಕೆ ಆದ ಮೇಲೆ ಮಾಲೀಕರು ಕುಟುಂಬ ಸಮೇತ ಆತಂಕವಿಲ್ಲದೆ ತೆರಳಬಹುದು ಎಂದು ಹೇಳಿದರು.
ಬಹಳಷ್ಟು ಮನೆ ಮಾಲೀಕರು ಅಕ್ಕಪಕ್ಕದವರಿಗೆ ಹೇಳಿ ಹೋಗುತ್ತಾರೆ. ಇನ್ನೂ ಕೆಲವರು ಸಂಪರ್ಕವನ್ನೇ ಇಟ್ಟುಕೊಂಡಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸುದೀರ್ಘವಾಗಿ ಮನೆಗಳಲ್ಲಿ ಯಾರು ಇರುವುದಿಲ್ಲ ಎಂಬುದನ್ನು ಪತ್ತೆ ಮಾಡುವುದು ಕಷ್ಟಕರವಾಗುತ್ತದೆ. ಈ ನಡುವೆ 112ಗೆ ಫೋನ್ ಮಾಡುವ ವ್ಯವಸ್ಥೆ ಇದ್ದರೂ ಪರಿಣಾಮಕಾರಿಯಾಗುತ್ತಿಲ್ಲ. ಅದನ್ನು ಮನಗಂಡಿರುವ ಡಿಜಿಐಜಿ ಡಾ. ಎಂ.ಎ.ಸಲೀಂ ಅವರು ಎಲ್‌ಎಚ್‌ಬಿಎಸ್‌ಗೆ ನಿರ್ದೇಶನ ನೀಡಿದ್ದಾರೆ ಎಂದರು. ಜಿಲ್ಲೆಯಲ್ಲಿ ಜಿಐ ಟ್ಯಾಗ್ ಇರುವ 30,104 ಸಿಸಿ ಕ್ಯಾಮರಾಗಳನ್ನು ಖಾಸಗಿ ಮತ್ತು ಸಾರ್ವಜನಿಕವಾಗಿ ಅಳವಡಿಕೆ ಮಾಡಲಾಗಿದೆ. ಅದರಲ್ಲಿ ಶಿವಮೊಗ್ಗ ನಗರದಲ್ಲಿ 20,356 ಸಿಸಿ ಕ್ಯಾಮರಾಗಳಿವೆ ಎಂದು ತಿಳಿಸಿದರು.