ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಆಯೋಜಿಸಿದ್ದ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಡಾ. ಆರ್.ಸಿ.ಜಗದೀಶ್, ಡಾ. ಎಂ.ಪ್ರಭಾಕರ್, ಎಚ್.ಎಸ್.ಶಶಾಂಕ್, ಡಾ. ಬಿ.ಹೇಮ್ಲಾನಾಯ್ಕಾ ಇತರರಿದ್ದರು. 
ಶಿವಮೊಗ್ಗ

ಕೃಷಿ ಕ್ಷೇತ್ರದಲ್ಲಿ ಅಪಾರ ಉದ್ಯೋಗ | Research Conference

ಆನಂದಪುರ: ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇರುವ ಹಲವು ಅವಕಾಶಗಳನ್ನು  ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ(ಅಟಾರಿ) ನಿರ್ದೇಶಕ ಡಾ. ಎಂ.ಪ್ರಭಾಕರ್ ಹೇಳಿದರು.
ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ 10ನೇ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿವೆ. ವಿದ್ಯಾರ್ಥಿಗಳು ಹಾಗೂ ರೈತರು ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿವೆ ಎಂದರು.
ಕೃಷಿಯಲ್ಲಿ ಕೌಶಲ ಮತ್ತು ಜ್ಞಾನದ ಸಮ್ಮಿಲನದ ಮುಖೇನ ಉದ್ಯಮಶೀಲ ಮನೋಭಾವವನ್ನು ಉತ್ತೇಜಿಸಬೇಕು. ಇಂತಹ ವಾತಾವರಣವನ್ನು ಎಲ್ಲ ವಿಶ್ವವಿದ್ಯಾಲಯಗಳು ಸೃಷ್ಟಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗದಾತರನ್ನಾಗಿ ಮಾಡುವಂತೆ ಪ್ರೇರೇಪಿಸುವ ಮಹತ್ಕಾರ್ಯವನ್ನು ವಿಶ್ವವಿದ್ಯಾಲಯಗಳು ಕೈಗೊಳ್ಳಬೇಕೆಂದು ಹೇಳಿದರು.
ಆಡಳಿತ ಮಂಡಳಿ ಸದಸ್ಯ ಯೋಗೇಶ್ವರ್ ಮಾತನಾಡಿ, ಉದಯೋನ್ಮುಖ ವಿಜ್ಞಾನಿಗಳು ನಡೆಸುವ ವೈಜ್ಞಾನಿಕ ಸಂಶೋಧನೆಗಳ ಮೂಲಕ ವಿಕಸಿತ ಭಾರತ ನಿರ್ಮಾಣ ಸಾಧ್ಯ. ಕೃಷಿ ಕ್ಷೇತ್ರಕ್ಕೆ ಮತ್ತು ಕೃಷಿಕರಿಗೆ ಆರ್ಥಿಕವಾಗಿ ಲಾಭದಾಯಕ ಮತ್ತು ಸುಸ್ಥಿರ ತಂತ್ರಜ್ಞಾನಗಳ ಅಭಿವೃದ್ಧಿಯು ವಿಶ್ವವಿದ್ಯಾಲಯದ ಧ್ಯೇಯವಾಕ್ಯ. ಇಂತಹ ಸಮ್ಮೇಳನಗಳು ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಹೆಚ್ಚು ಉತ್ತೇಜನ ನೀಡುತ್ತದೆ ಎಂದು ಹೇಳಿದರು.
ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಆಡಳಿತ ಮಂಡಳಿ ಸದಸ್ಯರಾದ ದೇವಿಕುಮಾರ್, ಡಾ. ಬಸವರಾಜ್ ನಾಯ್ಕ ಮಾತನಾಡಿದರು. ಶಿಕ್ಷಣ ನಿರ್ದೇಶಕರಾದ ಡಾ. ಬಿ.ಹೇಮ್ಲಾನಾಯ್ಕಾ, ವಿಸ್ತರಣಾ ನಿರ್ದೇಶಕರಾದ ಡಾ. ರಾಘವೇಂದ್ರ ಮೇಸ್ತ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಎನ್.ಎಸ್.ಮಾವರಕರ, ಸಂಘಟನಾ ಕಾರ್ಯದರ್ಶಿ ಡಾ. ಟಿ.ಕೆ.ನಾಗರತ್ನಾ ಉಪಸ್ಥಿತರಿದ್ದರು.