ಬಬ್ಬೂರು ಕಮ್ಮೆ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾರಕೋಡ್ಲು ಗುರುಮೂರ್ತಿ, ಸುಮಿತ್ರಮ್ಮ, ನಾಗೇಶ್, ಬಿ.ಎಸ್.ಶಂಕರಮೂರ್ತಿ, ಲಕ್ಷ್ಮೀ ಶ್ರೀಧರ್, ಡಾ.ಎಂ.ಎಚ್.ವಿದ್ಯಾಶಂಕರ, ಎನ್.ಸತ್ಯನ್ ಮುಂತಾದವರಿದ್ದರು. 
ಶಿವಮೊಗ್ಗ

ಹಿರಿಯರೇ ವಿಮುಖರಾದರೆ ಯುವಜನರಿಗೆ ಸಿಗದು ಮಾರ್ಗದರ್ಶನ I guidence for brahmana youth

ಪ್ರಮುಖ ಮುಖ್ಯಾಂಶಗಳು

  • ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನಟರಾಜ್ ಭಾಗವತ್ ಅನಿಸಿಕೆ
  • ಬಬ್ಬೂರುಕಮ್ಮೆ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ
  • ನಿಜವಾದ ಬ್ರಾಹ್ಮಣ್ಯ ಹುಡುಕುವ ಪರಿಸ್ಥಿತಿ
ಶಿವಮೊಗ್ಗ: ಪ್ರತಿಭೆಯನ್ನು ಹಣ ಸಂಪಾದನೆಯ ಸಾಮರ್ಥ್ಯದಲ್ಲಿ ಅಳೆಯಲಾಗುತ್ತಿದೆ. ಹೀಗಾಗಿ ಇಂದು ಬ್ರಾಹ್ಮಣ (brahmana) ಸಮಾಜ ಇಂದು ಗಂಭೀರವಾದ ಕಾಲಘಟ್ಟದಲ್ಲಿದೆ. ಜೀವನಶೈಲಿ (life style) ಬದಲಾದ ಪರಿಣಾಮ ನಿಜವಾದ ಬ್ರಾಹ್ಮಣ್ಯವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್ (bhagawat) ಕಳವಳ ವ್ಯಕ್ತಪಡಿಸಿದರು.
ನಗರದ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಬಬ್ಬೂರುಕಮೆ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ್ಯದ ಮೂಲಸೆಲೆಯಾದ ಧ್ಯಾನ, ತಪ, ಯಜ್ಞಗಳಿಂದ ಹಿರಿಯರೇ ವಿಮುಖರಾಗುತ್ತಿದ್ದಾರೆ. ಹೀಗಿರುವಾಗ ಇಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವವರು ಯಾರು? ಎಂದು ಪ್ರಶ್ನಿಸಿದರು.
ಇಂದು ಬ್ರಾಹ್ಮಣ ಸಮಾಜದಲ್ಲಿ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅದು ಹಿಂದಿನವರ ತಪೋಶಕ್ತಿ, ಅನುಷ್ಠಾನದಿಂದ ಸಿಕ್ಕಿರುವಂತಾದ್ದು. ಆದರೆ ಬ್ರಾಹ್ಮಣ್ಯದ ಮೂಲ ಚಿಂತನೆಯನ್ನು ಮುಂದುವರಿಸಿಕೊಂಡು ಹೋಗದೇ ಇದ್ದರೆ ಕ್ರಮೇಣ ಮುಂದಿನ ಪೀಳಿಗೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಜ್ಞಾನ ಪರಂಪರೆಯಲ್ಲಿ ಹಿನ್ನಡೆ ಅನುಭವಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದು ಸ್ಪರ್ಧಾತ್ಮಕ ಯುಗ. ನಮ್ಮ ಸಮಾಜದ ಯುವಕರು ಸಹಜವಾಗಿಯೇ ತಮ್ಮ ಸಾಮರ್ಥ್ಯದಿಂದ ಯಶಸ್ಸು ಪಡೆಯುತ್ತಿದ್ದಾರೆ. ಆದರೆ ಬೇರೆಯವರು ಅನ್ಯ ಕಾರಣದಿಂದ ಅವಕಾಶಗಳನ್ನು ಪಡೆದು ತೀವ್ರ ಸ್ಪರ್ಧೆಯೊಡ್ಡುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಸಂಖ್ಯೆಯೂ ಕ್ಷೀಣಿಸುತ್ತಿದೆ. ಬ್ರಾಹ್ಮಣ ಸಮಾಜದ ಸತಿ-ಪತಿ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಯಾರಾದರೂ ಹೇಳಿದರೆ ನಾವು ಅಪಹಾಸ್ಯ ಮಾಡುತ್ತಿದ್ದೇವೆ. ಆದರೆ ಇಂದಿನ ಸ್ಥಿತಿಯಲ್ಲಿ ಇದು ಅನಿವಾರ್ಯ ಎಂದು ಅರ್ಥೈಸಿದರು.
ಬಬ್ಬೂರು ಕಮ್ಮೆ ಸೇವಾ ಸಮಿತಿ ಅಧ್ಯಕ್ಷ ವೇ.ಬ್ರ.ಶ್ರೀ ಕಾರಕೋಡ್ಲು ಗುರುಮೂರ್ತಿ, ಗೌರವಾಧ್ಯಕ್ಷೆ ಸುಮಿತ್ರಮ್ಮ, ಉಪಾಧ್ಯಕ್ಷ ಬಿ.ಎಸ್.ಶಂಕರಮೂರ್ತಿ, ಪ್ರಧಾನ ಕಾರ್ಯದರ್ಶಿ ಎಸ್.ನಾಗೇಶ್, ಸಹಕಾರ್ಯದರ್ಶಿ ಲಕ್ಷ್ಮೀ ಶ್ರೀಧರ್, ಖಜಾಂಚಿ ಎಸ್.ಎನ್.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಎನ್.ಸತ್ಯನ್, ನಿರ್ದೇಶಕ ಡಾ.ಎಂ.ಎಚ್.ವಿದ್ಯಾಶಂಕರ್ ಉಪಸ್ಥಿತರಿದ್ದರು.


ವಿವಿಧ ಕಾರ್ಯಕ್ರಮಗಳು

ಬಬ್ಬೂರುಕಮ್ಮೆ ಸೇವಾ ಸಮಿತಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಂಗವಾಗಿ ಬೆಳಗ್ಗೆ ಸತ್ಯನಾರಾಯಣ ಪೂಜೆ ಹಾಗೂ ರುದ್ರಾಭಿಷೇಕ ಏರ್ಪಡಿಸಲಾಗಿತ್ತು. ಮಹಾಸಭೆಯ ಬಳಿಕ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಸಂಸ್ಕೃತದಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸುಮಿತ್ರಮ್ಮ ಹಾಗೂ ಪದ್ಮಾ ಕೇಶವಮೂರ್ತಿ ಬಬ್ಬೂರು ಕಮ್ಮೆ ಮಹಿಳಾ ಘಟಕವನ್ನು ಉದ್ಘಾಟಿಸಿದರು. ವೇದ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆದ ವೇ.ಬ್ರ.ಶ್ರೀ ಪಲ್ಗುಣ ಶರ್ಮ ಅವರಿಗೆ ಗೌರವ ಸಮಿರ್ಪಿಸಲಾಯಿತು.

ಸಂಸ್ಕಾರ ನೀಡದ ಪಾಲಕರೇ ವೈರಿಗಳು

ಮಕ್ಕಳಿಗೆ ಸಂಸ್ಕಾರ ನೀಡದ ತಂದೆ ತನ್ನ ಮಕ್ಕಳ ಪಾಲಿಗೆ ವೈರಿಯಾದರೆ, ತಾಯಿ ಶತ್ರುವಂತಾಗುತ್ತಾಳೆ. ಹೀಗಾಗಿ ಮಕ್ಕಳಿಗೆ ಮೂಲದಲ್ಲೇ ಸಂಸ್ಕಾರ ನೀಡಬೇಕು. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸಮಾಜದ ಹೊಣೆಗಾರಿಕೆಯೂ ಇದೆ ಎಂದು ಡಾ.ಎಂ.ಎಚ್.ವಿದ್ಯಾಶಂಕರ ಹೇಳಿದರು.
ಇಂದಿನ ಶಿಕ್ಷಣ ಅಂಕ ಗಳಿಕೆಗೆ ಸೀಮಿತವಾಗಿದೆ. ಆಯಾ ವರ್ಷ ಓದಿದ್ದನ್ನು ಅದೇ ವರ್ಷ ಮರೆಯುವ, ಮುಂದಿನದರತ್ತ ಗಮನಹರಿಸುವ ಪರಿಪಾಠ ಬೆಳೆಯುತ್ತಿದೆ. ಇಂತಹ ಶಿಕ್ಷಣದಿಂದ ಪ್ರಯೋಜನವಿಲ್ಲ. ಅಂಕಗಳಿಂದ ನಮಗೆ ಮುಂದಿನ ಶಿಕ್ಷಣಕ್ಕೆ ಪ್ರವೇಶಾತಿ ದೊರೆಯಬಹುದು. ಆದರೆ ಉದ್ಯೋಗ ದೊರೆಯುವುದು ನಮ್ಮಲ್ಲಿನ ಕೌಶಲದಿಂದ. ಹೀಗಾಗಿ ಕೌಶಲ ಬೆಳೆಸಿಕೊಳ್ಳಲು ಎಲ್ಲರೂ ಮುಂದಾಗಬೇಕೆಂದರು.
ನಿತ್ಯಾನುಷ್ಠಾನ ಪಾಲನೆಯಾಗಲಿ
ಮನೆಗಳಲ್ಲಿ ನಿತ್ಯಾನುಷ್ಠಾನ ಹಿರಿಯರಿಂದಲೇ ಪಾಲನೆಯಾಗಲಿ. ಅದು ಕಿರಿಯರಿಗೆ ಅನುಕರಣೀಯವಾಗಿರಲಿ. ಮಕ್ಕಳಲ್ಲಿ ಸಂಸ್ಕಾರ ಉಳಿಸಿ, ಬೆಳೆಸಬೇಕಾದ ಕಾರ್ಯ ಇಂದಿನ ತುರ್ತು ಅನಿವಾರ್ಯವಾಗಿದೆ ಎಂದು ವೇ.ಬ್ರ.ಶ್ರೀ ಕಾರಕೋಡ್ಲು ಗುರುಮೂರ್ತಿ ಹೇಳಿದರು.
ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸತ್ಸಂಗವಿಲ್ಲದಿದ್ದರೆ ಜನರು ಸಮಾಜಘಾತುಕ ವ್ಯಕ್ತಿಗಳಾಗುತ್ತಾರೆ. ಹೀಗಾಗಿ ಕಾಯಾ, ವಾಚಾ, ಮನಸಾ ಶುದ್ಧವಾಗಿರಬೇಕು. ತ್ರಿಕರಣಶುದ್ಧಿ ಹಾಗೂ ನಿತ್ಯ ಗಾಯತ್ರಿ ಮಂತ್ರ ಪಠಣದಿಂದ ನಿಶ್ಚಿತವಾಗಿಯೂ ಫಲ ಸಿಗುತ್ತದೆ ಎಂದು ತಿಳಿಸಿದರು.
ಯಾವುದೇ ಲೋಪವಿಲ್ಲದೆ 18 ವರ್ಷಗಳಿಂದ ಬಬ್ಬೂರು ಕಮ್ಮೆ ಸೇವಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಿಂದ ಉತ್ತಮ ಸಹಕಾರವೂ ದೊರೆಯುತ್ತಿದೆ. ಪ್ರತಿಭಾ ಪುರಸ್ಕಾರಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕರೆ ಅನುಕೂಲವಾಗುತ್ತದೆ. ಪ್ರತಿ ಕುಟುಂಬದಿಂದಲೂ ಮಾಸಿಕ 100 ರೂ. ದೇಣಿಯನ್ನು ಸಂಘಕ್ಕೆ ನೀಡಿದರೆ ಆರ್ಥಿಕ ಬಲ ದೊರೆಯುತ್ತದೆ ಎಂದರು.