ಸಾಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸ್ವಯಂಚಾಲಿತ ಚಾಲನಾ ಪಥ ಕಾಮಗಾರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿದರು. ವೀರೇಶ್, ಬಿ.ಎನ್.ವಾಸುದೇವ, ಚೇತನಕುಮಾರ್ ಇತರರಿದ್ದರು. 
ಶಿವಮೊಗ್ಗ

ಚಾಲನೆ ಸರಿಯಾಗಿದ್ದರೆ ಪರವಾನಗಿ ಕೊಡಿ | RTO Department

ಸಾಗರ: ವಾಹನ ಚಾಲನೆಯಲ್ಲಿ ಎಷ್ಟು ಎಚ್ಚರ ವಹಿಸಿದರೂ ಸಾಲದು. ಚಾಲನಾ ಪರವಾನಗಿ ಕೊಡಬೇಕಾದರೆ ಹೆಚ್ಚು ಜಾಗ್ರತೆ ವಹಿಸಿ. ಚಾಲನೆ ಸರಿಯಾಗಿದ್ದರೆ ಮಾತ್ರ ಪರವಾನಗಿ ಕೊಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸುತ್ತಿರುವ 5.65 ಕೋಟಿ ರೂ. ವೆಚ್ಚದ ಸ್ವಯಂಚಾಲಿತ ಚಾಲನಾ ಪಥ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಚಾಲನಾ ಪರವಾನಗಿ ಪಡೆಯುವವರ ಚಾಲನೆ ಪರಿಶೀಲಿಸಲು ಸುಸಜ್ಜಿತ ಪಥವನ್ನು ನಿರ್ಮಿಸಲಾಗಿದೆ. ಸಾರಿಗೆ ಸಚಿವರು ಹಿಂದೆ ಹಣ ಮಂಜೂರು ಮಾಡಿದ್ದರು. ಇದೀಗ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಜುಲೈ ತಿಂಗಳಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ ಎಂದರು
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಮೀನು ಮಾರ್ಕೇಟ್ ಅಭಿವೃದ್ದಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಒಳಾಂಗಣ ಕ್ರೀಡಾಂಗಣಕ್ಕೆ ಫ್ಲಡ್‌ಲೈಟ್ ಅಳವಡಿಸಲಾಗಿದೆ. ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಹಲವು ಬಾರಿ ಅವಕಾಶ ನೀಡಲಾಗಿದ್ದು ಇನ್ನು ಕಾಯುತ್ತ ಕೂರುವುದಿಲ್ಲ. ರಸ್ತೆ ಅಗಲೀಕರಣವಾಗಬೇಕು ಎಂದು ಸಾರ್ವಜನಿಕರ ಒತ್ತಾಯವಿದೆ. 34 ಕೋಟಿ ರೂ. ಹಣ ಇರಿಸಿಕೊಂಡು ಕಾಮಗಾರಿ ಮಾಡದಿರುವುದು ಸರಿಯಲ್ಲ. ಅಧಿಕಾರಿಗಳು ಈಗಾಗಲೆ ಸೂಚನೆ ನೀಡಿದ್ದಾರೆ. ಮುಂದಿನ ಒಂದು ವಾರದೊಳಗೆ ಅಗಲೀಕರಣ ಪ್ರಕ್ರಿಯೆ ನಡೆಯಲಿದೆ. ಪರಿಹಾರದ ಹಣ ಡಿಪಾಸಿಟ್ ಮಾಡಿ ಅಗಲೀಕರಣ ನಡೆಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಇಲಾಖೆಯ ವೀರೇಶ್, ಬಿ.ಎನ್.ವಾಸುದೇವ, ಚೇತನಕುಮಾರ್, ಹುಚ್ಚಪ್ಪ, ಕೆ.ಬಿ.ಉಮೇಶ್, ಪ್ರಮುಖರಾದ ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಅನ್ವರ್ ಬಾಷಾ, ಜಯರಾಮ್, ಭವ್ಯಾ, ನಾಗರಾಜ್ ಇತರರಿದ್ದರು.