ಸಾಗರದಲ್ಲಿ ಆಪ್‌ಕೋಸ್‌ನಿಂದ ಷೇರುದಾರರಿಗೆ ಆಯೋಜಿಸಿದ್ದ ಹೃದಯ ಮತ್ತು ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಅಧ್ಯಕ್ಷ ಬಿ.ಎ.ಇಂದೂಧರ ಉದ್ಘಾಟಿಸಿದರು. ಡಾ. ಪಲ್ಲವಿ ಗೋಜನಾರ್, ಡಾ. ಯೋಗರಾಜ್, ಸುರೇಶ್, ಭಾರತಿ ಇತರರಿದ್ದರು. 
ಶಿವಮೊಗ್ಗ

ಆರೋಗ್ಯ ಚೆನ್ನಾಗಿದ್ದರೆ ಬದುಕು ಸುಖಮಯ | health camp

ಸಾಗರ: ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕು. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಮ್ಮ ಬದುಕು ಆನಂದಮಯವಾಗಿರುತ್ತದೆ ಎಂದು ಸಾಗರ ಆಪ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು
ಸಾಗರದಲ್ಲಿ ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದಲ್ಲಿ ಸೋಮವಾರ ಷೇರುದಾರರಿಗೆ ಏರ್ಪಡಿಸಿದ್ದ ಉಚಿತ ಹೃದಯ ಮತ್ತು ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾಯಿಲೆ ಬಾರದಂತೆ ಕಾಲಕಾಲಕ್ಕೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯಕ್ಕಿಂತ ಅತಿದೊಡ್ಡ ಸಂಪತ್ತು ಯಾವುದೂ ಇಲ್ಲ. ಹಾಗಾಗಿ ಆಪ್‌ಕೋಸ್ ಕಣ್ಣು ಮತ್ತು ಹೃದಯ ತಪಾಸಣೆ ಶಿಬಿರ ಆಯೋಜಿಸುವ ಮೂಲಕ ಷೇರುದಾರರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದೆ. ಆಪ್‌ಕೋಸ್ ಕಾರ್ಯಚಟುವಟಿಕೆ ಉತ್ತಮವಾಗಿ ನಡೆಯುತ್ತಿದ್ದು ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು.
ವಾಸನ್ ಕಣ್ಣಿನ ಆಸ್ಪತ್ರೆ ವೈದ್ಯೆ ಪಲ್ಲವಿ ಗೋಜನಾರ್ ಮಾತನಾಡಿ, ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷೃ ಮಾಡಬೇಡಿ. ಆಗಾಗ್ಗೆ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ ಭವಿಷ್ಯದಲ್ಲಿ ಅಪಾಯದಿಂದ ದೂರವಾಗಬಹುದು ಎಂದು ತಿಳಿಸಿದರು.
ಹೃದಯ ತಜ್ಞ ಡಾ. ಯೋಗರಾಜ್ ಮಾತನಾಡಿ, ಮನುಷ್ಯನ ಆರೋಗ್ಯ ಹದಗೆಡಲು ಆಹಾರವೇ ಮುಖ್ಯ ಕಾರಣ. ಪೌಷ್ಟಿಕ ಅಹಾರ ಸೇವನೆ ಅಗತ್ಯ. ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೋಡಿಕೊಳ್ಳಬೇಕು. ಬಹುತೇಕ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವುದು ಕೂಡಾ ತೊಡಕಾಗುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕ ಸೂರ್ಯನಾರಾಯಣ, ಸುರೇಶ್, ಭಾರತಿ, ನಾಗರತ್ನ, ಡಾ. ನಿತಿನ್, ಡಾ. ರೋಹಿತ್, ಎಚ್.ಎನ್.ಲಂಬೋಧರ ಹಾಜರಿದ್ದರು.