ಪುಟ್ಟನ ಗೌಡ 
ಶಿವಮೊಗ್ಗ

ಅಡಕೆ, ಮೆಕ್ಕೆಜೊಳಕ್ಕೆ ಪರಿಹಾರ ಕೊಡಿ

ಶಿಕಾರಿಪುರ: ತಾಲೂಕಿನ ಅಡಕೆ ಬೆಳೆಗಾರರಿಗೆ ಕಳೆದ ವರ್ಷದಿಂದ ಬೆಳೆ ವಿಮೆ ಪರಿಹಾರ ಬಂದಿಲ್ಲ. ಇದರಿಂದ ತಾಲೂಕಿನ ಬಹುತೇಕ ಅಡಕೆ ಬೆಳೆಗಾರರಿಗೆ ತೊಂದರೆಯಾಗಿದೆ. ಅಲ್ಲದೆ ನಿರಂತರ ಮಳೆಯಿಂದ ಬಹುಪಾಲು ಮೆಕ್ಕೆಜೋಳದ ಫಸಲು ಹಾಳಾಗಿದ್ದು, ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನ ಗೌಡ ಹೇಳಿದರು.
ಕಳೆದ 7 ದಿನಗಳಿಂದ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನಲ್ಲಿ ರಾಜ್ಯ ರೈತ ಸಂಘವು ಕಬ್ಬಿನ ಬೆಲೆ ನಿಗದಿ ಮಾಡಲು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದೆ. ರೈತರ ಸಮಸ್ಯೆ ಕೇಳಲು ರಾಜ್ಯ ಸರ್ಕಾರದ ಮಂತ್ರಿಗಳಿಗೆ, ಸಂಸದರಿಗೆ, ಶಾಸಕರಿಗೆ ಬಿಡುವು ಇದ್ದಂತಿಲ್ಲ. ಆಡಳಿತ ಪಕ್ಷದ ನಿಜವಾದ ಬಣ್ಣ ಈಗ ಬಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಂಚಾಲಕ ಈಸೂರು ಸಂತೋಷ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಇವರಿಗೆ ರೈತರ ಪರ ಅನುಕಂಪವೇ ಇಲ್ಲ. ಕೇವಲ ಅಧಿಕಾರಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಬೇಕು. ಟನ್ ಕಬ್ಬಿಗೆ 3500 ರೂ. ದರ ನಿಗದಿಪಡಿಸಬೇಕು. ಆ ಭಾಗದಲ್ಲಿ ಜನಪ್ರತಿನಿಧಿಗಳ ಕಬ್ಬಿನ ಕಾರ್ಖಾನೆಗಳಿವೆ. ಆದ್ದರಿಂದ ಅವರು ಪ್ರತಿಭಟನಾನಿರತ ಕಬ್ಬು ಬೆಳೆಗಾರರ ಹಿತಕಾಯಲು ಮುಂದೆ ಬರುತ್ತಿಲ್ಲ. ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಣ್ಣ. ಲೋಕೇಶಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.