ಕಾಸರಗುಪ್ಪೆ ಗ್ರಾಮದ ಕೆರೆ ಬೇಟೆಯಲ್ಲಿ 8 ಕೆ.ಜಿ. ಮೀನು ಹಿಡಿದು ಸಂಭ್ರಮಿಸಿದ ಸಾಗರ ತಾಲೂಕಿನ ಜಿಗಟೆಕೊಪ್ಪದ ಲೋಕೇಶ್. 
ಶಿವಮೊಗ್ಗ

ಮೀನು ಸಿಗದೆ ಬೇಟೆಗಾರರಿಗೆ ನಿರಾಸೆ | fishering

ಸೊರಬ: ತಾಲೂಕಿನ ಕಾಸರಗುಪ್ಪೆ ಗ್ರಾಮದ ಬಸ್ ಸ್ಟಾೃಂಡ್ ಕೆರೆ(ಗೋಳಿಮರದ ಕೆರೆ) ಯಲ್ಲಿ ಭಾನುವಾರ ಮಲೆನಾಡಿನ ಜನಪದ ಕ್ರೀಡೆ ಮೀನು ಶಿಕಾರಿ ಸಡಗರದಿಂದ ಜರುಗಿತು.
ದೂರದ ಊರುಗಳಿಂದ ಮೀನು ಬೇಟೆಗಾರರು ಬರುವಷ್ಟರಲ್ಲಿ ಅಕ್ಕಪಕ್ಕದ ಊರುಗಳ ಮೊದಲೇ ಬಂದು ಕೆರೆಗೆ ಧುಮಿಕಿದ್ದರು. ನಂತರ ಬಂದವರು ನಿರಾಸೆಯಿಂದ ಕೆಲವರು ಮನೆಗೆ ಹೋದರೆ ಮತ್ತೆ ಕೆಲವರು ಲೇಟಾಗಿ ಬಂದಿದ್ದೇವೆ. ದೊಡ್ಡು ಕೊಡಲ್ಲ ಎಂದು ಕೆರೆಗೆ ಇಳಿದು ಮೀನು ಬೇಟೆ ಆಡಿಕೊಂಡೇ ಹೋದರು.  
ಮುಂಗಾರು ಆರಂಭವಾದರೂ ತಾಲೂಕಿನಲ್ಲಿ ಮಾತ್ರ ಇನ್ನೂ ಕೆರೆಬೇಟೆ ನಡೆಯುತ್ತಲೇ ಇದೆ. ಮೋಡ ಕವಿದ ಚಳಿ ವಾತಾವರಣ. ಕೆರೆಯಲ್ಲಿಯೂ ಮೈಕೊರೆಯುವ ತಣ್ಣನೆಯ ನೀರನ್ನು ಲೆಕ್ಕಿಸದೆ ಮೀನು ಹಿಡಿವ ಹುಮ್ಮಸಿನಿಂದ ಕುಣಿ ಹಿಡಿದು ಮುನ್ನುಗಿದರು. ಕೆರೆಯಿಂದ ಮೇಲೆ ಹತ್ತುವಾಗ ಚಳಿಯಿಂದ ನಡುಗುತ್ತ ಹೊರಬಂದ ಕೆಲವರು ಮೀನು ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೆಲವರಿಗೆ ಭಾರಿ ಗಾತ್ರದ ಮೀನುಗಳು ಸಿಗದಿದ್ದರೂ ಕೊಟ್ಟ ಕಾಸಿಗೆ ಸಮವಾಗಿದೆ ಎಂದು ಸಮಾಧಾನಪಟ್ಟರು.
ಎರಡು ವರ್ಷಗಳಿಂದ ಕೆರೆಬೇಟೆ ಆಗದಿದ್ದರೂ ಭಾರಿ ಗಾತ್ರದ ಮೀನು ಹಾಗೂ ಅಧಿಕ ಮೀನುಗಳು ಸಹ ಇರಲಿಲ್ಲ. ಸಾಗರ  ತಾಲೂಕಿನ ಜಿಗಟೆಕೊಪ್ಪದ ಲೋಕೇಶ್ 8 ಕೆ.ಜಿ. ಮೀನು ಹಿಡಿದು ಸಂಭ್ರಮಿಸಿದರು. ಮತ್ತೆ ಕೆಲವರು ಸಣ್ಣ ಸಣ್ಣ ಮೀನು ಹಿಡಿದು ಖುಷಿಪಟ್ಟರು.
ಗ್ರಾಮದಲ್ಲಿ ಮಾರಿಕಾಂಬಾ ದೇವಿಯ ಕಟ್ಟಡದ ಸಹಾಯಾರ್ಥ ನಡೆದ ಕೆರೆಬೇಟೆಗೆ ಒಂದು ಕೂಣಿಗೆ 500 ರೂ. ನಿಗದಿ ಮಾಡಲಾಗಿತ್ತು. ಗ್ರಾಮದವರು ಮಾತ್ರವಲ್ಲದೆ ಸಾಗರ, ತ್ಯಾಗರ್ತಿ, ಸಿದ್ದಾಪುರ, ಆನವಟ್ಟಿ, ಹಾನಗಲ್, ಶಿರಾಳಕೊಪ್ಪ ಭಾಗದದಿಂದಲೂ ಕೆರೆಬೇಟೆ ಕಲಿಗಳು ಆಗಮಿಸಿದ್ದರು. ಬಿದರಿನ ಕೂಣಿ ಬದಲಿಗೆ ಕಬ್ಬಿಣದ ಕೂಣಿಗಳನ್ನು ಬಳಸಲಾಯಿತು. ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.