ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹುಣಸೂರು ಕಿಬ್ಬಚ್ಚಲು ಸರ್ಕಾರಿ ಶಾಲೆ. 
ಶಿವಮೊಗ್ಗ

ಹುಣಸೂರು ಸರ್ಕಾರಿ ಶಾಲೆ ಅಮೃತ ಮಹೋತ್ಸವ

ತಾಳಗುಪ್ಪ: ಸರ್ಕಾರಿ ಶಾಲೆಯೆಂದರೆ ಸೌಲಭ್ಯಗಳ ಕೊರತೆ ಇರುವುದು ಸಹಜ. ಆದರೆ ತಾಳಗುಪ್ಪ ಹೋಬಳಿಯ ಮರತ್ತೂರು ಗ್ರಾಮ ಪಂಚಾಯಿತಿಯ ಹುಣಸೂರು-ಕಿಬ್ಬಚ್ಚಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಸಜ್ಜಿತವಾಗಿದೆ. ಇದೀಗ ನ.16ರಂದು ಅಮೃತ ಮಹೋತ್ಸವಕ್ಕೆ ಸಜ್ಜಾಗಿದೆ.
1948ರಲ್ಲಿ ಸ್ಥಾಪನೆಯಾದ ಸರ್ಕಾರಿ ಶಾಲೆ ಸಾವಿರಾರು ಜನರಿಗೆ ದಾರಿದೀಪವಾಗಿದೆ. ಶಾಲೆಯಲ್ಲಿ ಪ್ರಸ್ತುತ 62 ವಿದ್ಯಾರ್ಥಿಗಳಿದ್ದು, ಖಾಸಗಿ ಶಾಲೆಗೆ ಪೈಪೋಟಿ ನೀಡುವಂತಿದೆ. ಕಂಪ್ಯೂಟರ್ ಶಿಕ್ಷಣ, ಈ ವರ್ಷದಿಂದ ಆಂಗ್ಲ ಭಾಷೆ ಕಲಿಕೆಯೂ ಆರಂಭವಾಗಿದೆ. ನಾಲ್ಕು ಜನ ಕಾಯಂ, ಒಬ್ಬ ಅತಿಥಿ ಶಿಕ್ಷಕರು ಇದ್ದಾರೆ. ಶಾಲೆಯ ಆವರಣದಲ್ಲಿ ಸುಂದರ ಕೈತೋಟ, ತರಕಾರಿ ಬೆಳೆಗಳು ನಳನಳಿಸುತ್ತಿವೆ. ಇದಕ್ಕೆ ಸ್ಥಳೀಯರ ಉತ್ಸಾಹ ಹಾಗೂ ಅಧ್ಯಾಪಕರ ಶ್ರಮವೇ ಕಾರಣ.
ಸರ್ಕಾರ ಪಾಲಕರನ್ನು ಮಾತ್ರ ಎಸ್‌ಡಿಎಂಸಿ ಸದಸ್ಯರನ್ನಾಗಿ ಮಾಡಬೇಕೆಂಬ ನಿಯಮ ತಂದ ನಂತರ ಹಲವು ಊರಿನ ಶಾಲೆಗಳಿಗೆ ಹಿನ್ನೆಡೆಯಾಯಿತು. ಕಾರಣ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಲ್ಲದವರು ಶಾಲೆಯಿಂದ ಸಹಜವಾಗಿ ದೂರವಾಗುತ್ತಿದ್ದರು. ಆದರೆ ಈ ಶಾಲೆ ಹಾಗಾಗಲಿಲ್ಲ. ಗ್ರಾಮ ಸುಧಾರಣಾ ಸಮಿತಿ ಹುಣಸೂರು ಹಾಗೂ ಹಳೇ ವಿದ್ಯಾರ್ಥಿ ಸಂಘಗಳನ್ನು ಮಾಡಿಕೊಂಡು ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. 
ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭಾಗವಹಿಸುವರು. ಗ್ರಾಮ ಹಾಗೂ ಶಾಲೆ ಪರವಾಗಿ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಿಂದ ಅಂದು ರಾತ್ರಿ 8 ಗಂಟೆಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶುಭಕರ್ ತಿಳಿಸಿದ್ದಾರೆ.