ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಗುಡ್ ಶರ್ಡ್ ಚರ್ಚ್‌ನ ವಾರ್ಷಿಕೋತ್ಸವದಲ್ಲಿ ಧರ್ಮಗುರು ರೋಮನ್ ಪಿಂಟೋ ಮಾತನಾಡಿದರು. ಬಿನೋಯ್, ಸುಬಿನ್, ಮೈಕಲ್ ಇತರರಿದ್ದರು.
ರಿಪ್ಪನ್‌ಪೇಟೆ: ಜೀವನ ಸುಲಭವಾಗಿಸಿಕೊಳ್ಳುವ ಮಾನವೀಯ ಗುಣಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕಬಳೆ ಚರ್ಚ್ ಧರ್ಮಗುರು ರೋಮನ್ ಪಿಂಟೋ ಹೇಳಿದರು.
ಪಟ್ಟಣದ ವಿನಾಯಕ ವೃತ್ತದಲ್ಲಿ ಆಯೋಜಿಸಿದ್ದ ಗುಡ್ ಶರ್ಡ್ ಚರ್ಚ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸತನದ ಬದುಕಿನಲ್ಲಿ ಹಳೆಯದೆಲ್ಲವನ್ನೂ ಮರೆತುಬಿಟ್ಟಿದ್ದೇವೆ. ಪ್ರಚಲಿತ ವಿದ್ಯಾಮಾನಗಳನ್ನು ಗಮನಿಸಿದರೆ ನಾವು ಇಷ್ಟಪಟ್ಟು ಪಡೆದ ವಸ್ತು, ಸಂಬಂಧಗಳಲ್ಲಿ ಭರವಸೆ ಇಡಲಾಗುತ್ತಿಲ್ಲ ಎಂದರು.
ಹಿಂದಿನ ಕಾಲದಲ್ಲಿ ಮಣ್ಣಿನ ಮಂದಿರ, ಮಸೀದಿ, ಚರ್ಚ್‌ಗಳನ್ನು ತೆಗೆದು ಕಾಂಕ್ರೀಟ್ ಕಟ್ಟಡ ನಿರ್ಮಿಸಿದ್ದೇವೆ. ಕಲ್ಲು, ಮರದ ಮೂರ್ತಿಗಳಿಗೆ ಚಿನ್ನಾವೃತ ಮಾಡಿದ್ದೇವೆ. ಆದರೆ ಅವುಗಳಂತೆ ವಿಕಾಸವಾಗಬೇಕಿದ್ದ ಜನರ ಮಾನವೀಯತೆ ಮಾತ್ರ ಬದಲಾಗಿಲ್ಲ. ಅಸತ್ಯ, ಹಿಂಸೆ, ವಂಚನೆ, ಮತ್ಸರಗಳಿಂದ ಮನಸುಗಳಿಗೆ ಬೆಂಕಿಹಚ್ಚಲಾಗುತ್ತಿದೆ. ಕೆಟ್ಟದ್ದನ್ನು ಹೇಳದ, ಕೆಡುಕನ್ನು ಬಯಸದ ಎಲ್ಲ ಧರ್ಮಗಳ ಸಾರ ಒಳಿತು ಮಾಡು ಮನುಷ ಎಂದಿರುವಾಗ ಮತ್ಯಾಕೆ ಭಿನ್ನ ಪಥ. ಸಾಮರಸ್ಯದಿಂದ ಬದುಕಿ ದೇಶವನ್ನು ಶ್ರೀಮಂತಗೊಳಿಸೋಣ ಎಂದರು.
ಏಸುಕ್ರಿಸ್ತ, ಮೇರಿ ಮಾತಾ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಧರ್ಮಗುರುಗಳಾದ ಬಿನೋಯ್, ಆನಂದಪುರದ ಸುಬಿನ್, ಶಿವಮೊಗ್ಗದ ಮೈಕಲ್, ವಿಲ್ಸನ್ ಇತರರಿದ್ದರು.