ಫ್ಲೆಕ್ಸ್ ಅಳವಡಿಕೆಯಲ್ಲಿ ಸಾಗರ ನಗರಸಭೆ ಆಡಳಿತ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕೆ.ಆರ್.ಗಣೇಶ್‌ಪ್ರಸಾದ್, ಆರ್.ಶ್ರೀನಿವಾಸ್, ಅರುಣ ಕುಗ್ವೆ, ಸವಿತಾ ವಾಸು, ದೇವೇಂದ್ರಪ್ಪ ಇತರರಿದ್ದರು.
ಸಾಗರ: ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಕೆಯಲ್ಲಿ ನಗರಸಭೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ನಗರಸಭೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ನಗರದಾದ್ಯಂತ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಲ್ಲಿ ಶಾಸಕರ ಫ್ಲೆಕ್ಸ್‌ಗಳೇ ರಾರಾಜಿಸುತ್ತಿದ್ದವು. ಇದರಿಂದ ನಗರಸಭೆಗೆ ಬಂದ ಆದಾಯ ಎಷ್ಟು ಎಂಬುದನ್ನು ಪೌರಾಯುಕ್ತರು ಬಹಿರಂಗಪಡಿಸಬೇಕು. ಬಿಜೆಪಿಯವರು ಹಾಕಿರುವ ಫ್ಲೆಕ್ಸ್‌ಗಳನ್ನು ಒಂದೆರಡು ದಿನಗಳಲ್ಲಿ ತೆಗೆಯುವ ನಗರಸಭೆ ಆಡಳಿತವು ಶಾಸಕರು ಮತ್ತು ಬೆಂಬಲಿಗರು ಹಾಕಿರುವ ಫ್ಲೆಕ್ಸ್‌ಗಳನ್ನು ತಿಂಗಳುಗಟ್ಟಲೆ ತೆಗೆಯದೆ ತಾರತಮ್ಯ ಮಾಡುತ್ತಾರೆ ಎಂದು ದೂರಿದರು.
ನಗರವ್ಯಾಪ್ತಿಯಲ್ಲಿ ನಳ ತೆರಿಗೆ ಸಂಗ್ರಹಕ್ಕೆ ಹೋಗುವಾಗ ಅಧಿಕಾರಿಗಳು ಗುದ್ದಲಿ, ಪಿಕಾಸಿ ಹಿಡಿದುಕೊಂಡು ಬರುವ ಮೂಲಕ ಮನೆ ಮಾಲೀಕರಲ್ಲಿ ಆತಂಕ ಉಂಟುಮಾಡುತ್ತಿದ್ದಾರೆ. ನಳ ಕಂದಾಯ ಪಾವತಿ ಮಾಡಲಿಲ್ಲ ಎಂದು ಸ್ಥಳದಲ್ಲಿಯೇ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಬಿಲ್ ಕಲೆಕ್ಟರ್ ಕುಮಾರ್ ಎಂಬಾತ ಮನೆ ಮಾಲೀಕರ ಮೇಲೆ ಒತ್ತಡ ಹಾಕುತ್ತಿದ್ದಾನೆ. ಈ ಕುರಿತು ತನಿಖೆ ನಡೆಸಿ ಸಂಬಂಧಿಸಿದವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕರು ಫ್ಲೆಕ್ಸ್‌ಗಳಲ್ಲಿ ಮಿಂಚಿದರೇ ಹೊರತು ನಗರಸಭೆಗೆ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಿಲ್ಲ. ಗಣಪತಿ ಬ್ಯಾಂಕ್ ಪಕ್ಕದಲ್ಲಿ ದೊಡ್ಡ ಅಂಗಡಿ ನಿರ್ಮಿಸಲಾಗಿದೆ. ಆರ್‌ಬಿಐ ನಿಯಮ ಪ್ರಕಾರ ಅಂತಹ ಅಂಗಡಿಗಳು ಬ್ಯಾಂಕ್ ಪಕ್ಕದಲ್ಲಿ ಇರಬಾರದು. ನಗರಸಭೆಗೆ ಹತ್ತಾರು ಬಾರಿ ಹೇಳಿದರೂ ತೆರವುಗೊಳಿಸಿಲ್ಲ. ಇಲ್ಲಿ ಕಸದ ರಾಶಿ ಹಾಕಲಾಗುತ್ತಿದೆ. ತಾಲೂಕು ಕಚೇರಿ ಎದುರಲ್ಲೂ ಮನಬಂದಂತೆ ಅಂಗಡಿಗಳನ್ನು ಹಾಕಿದ್ದಾರೆ. ನಗರಸಭೆ ತಪ್ಪು ತಿದ್ದಿಕೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಫ್ಲೆಕ್ಸ್ ಹಾಕುವಲ್ಲಿಯೇ ಆಡಳಿತ ಪಕ್ಷ ಹೆಚ್ಚು ಶ್ರಮಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ವ್ಯವಸ್ಥಿತವಾದ ಕಾಮಗಾರಿಗಳು ನಡೆದಿಲ್ಲ ಎಂದು ದೂರಿದರು.
ಬಿಜೆಪಿ ಪ್ರಮುಖರಾದ ಕೆ.ಆರ್.ಗಣೇಶ್‌ಪ್ರಸಾದ್, ಆರ್.ಶ್ರೀನಿವಾಸ್, ಅರುಣ ಕುಗ್ವೆ, ಸವಿತಾ ವಾಸು, ಮಹೇಶ್, ದೇವೇಂದ್ರಪ್ಪ ಯಲಕುಂದ್ಲಿ, ಸತೀಶ್ ಕೆ., ಗಾಯತ್ರಿ ಮಲ್ಲೇಶಪ್ಪ, ಶ್ರೀರಾಮ್, ಸಂತೋಷ್ ಶೇಟ್, ಶ್ವೇತಾ, ಬಿ.ಟಿ. ರವೀಂದ್ರ, ಜಗನ್ನಾಥ್ ಶೇಟ್, ಸುಜಯ್, ಚಂದ್ರಕಾಂತ್, ವಿನೋದ್‌ರಾಜ್, ಲೋಕೇಶ್ ಇತರರಿದ್ದರು.