ಹೊಸನಗರ ಕ್ಷೇತ್ರ ಮರು ರಚನೆಗೆ ಒತ್ತಾಯಿಸಿ ರಿಪ್ಪನ್‌ಪೇಟೆಯಲ್ಲಿ ಹೋರಾಟಗಾರರು ಡಿಸಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಮಧು ಬಂಗಾರಪ್ಪ, ಬಿ.ವೈ.ರಾಘವೇಂದ್ರ, ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ, ಬಿ.ಸ್ವಾಮಿ ರಾವ್, ಆರ್.ಎಂ.ಮಂಜುನಾಥ ಗೌಡ ಇತರರಿದ್ದರು.
ರಿಪ್ಪನ್‌ಪೇಟೆ: ಕಡ್ಡಾಯವಾಗಿ ಹೊಸನಗರ ಕ್ಷೇತ್ರ ಆಗಲೇಬೇಕು. ನಿಮ್ಮ ಆಗ್ರಹಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ರಾಜ್ಯದಿಂದ ಆಗಬೇಕಾದ ಎಲ್ಲ ಸಹಕಾರ ನೀಡಲು ನಾವು ಬದ್ಧರಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಹೊಸನಗರ ಕ್ಷೇತ್ರ ಮರು ರಚನೆಗೆ ಒತ್ತಾಯಿಸಿ ನಗರದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ರಿಪ್ಪನ್‌ಪೇಟೆ ತಲುಪಿದ್ದು, ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರ ವಿಂಗಡಣೆ ಕಾರ್ಯ ಕೇಂದ್ರ ಸರ್ಕಾರದ್ದು. ಹಾಗಾಗಿ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಈ ಬಗ್ಗೆ ಆಸಕ್ತಿ ತೋರಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾನೂನಿಗೆ ಒಳಪಟ್ಟು ಕೇತ್ರ ಮರು ಸ್ಥಾಪನೆಗಾಗಿ ನಾವೆಲ್ಲ ಸೇರಿ ಶ್ರಮಿಸೋಣ. ಈ ಭಾಗದ ಜನ ಮುಳುಗಡೆಯಿಂದ ನಲುಗಿದ್ದಾರೆ. ಈ ಪ್ರದೇಶದ ಸಮಗ್ರ ಅಭಿವೃದ್ಧಿಯೊಂದಿಗೆ ಕ್ಷೇತ್ರ ಮರು ರಚನೆ ಮಾಡಲು ಹೋರಡೋಣ ಎಂದು ತಿಳಿಸಿದರು.
ಮಾಜಿ ಶಾಸಕ ಬಿ.ಸ್ವಾಮಿ ರಾವ್ ಮಾತನಾಡಿ, ಈ ಕ್ಷೇತ್ರ ನನಗೆ ರಾಜಕೀಯ ಜನ್ಮ ನೀಡಿ ಶಾಸಕನನ್ನಾಗಿ ಮಾಡಿದೆ. ಕ್ಷೇತ್ರದಲ್ಲಿ ಒಟ್ಟು 10 ಬಾರಿ ಸ್ಪರ್ಧಿಸಿ 7 ಬಾರಿ ಸೋಲು ಅನುಭವಿಸಿ, 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದ್ದರಿಂದ ಮರು ಸ್ಥಾಪನೆ ಮಾಡುವ ಜವಾಬ್ದಾರಿ ಇದೆ. ಕ್ಷೇತ್ರ ಉಳಿಸುವ ಏಕೈಕ ಉದ್ದೇಶ ನನ್ನದು ಎಂದರು.
ಹೊಂಬುಜ ಜೈನ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ನಿಟ್ಟೂರು ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮುನೀರ್ ಸಾಖಾಫಿ, ಶಾಸಕ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಕಲಗೋಡು ರತ್ನಾಕರ್, ದೇವಾನಂದ, ಅಲುವಳ್ಳಿ ವೀರೇಶ್, ವರ್ತೇಶ್, ಸುರೇಶ್ ಸ್ವಾಮಿರಾವ್, ಮಾಸ್ತಿಕಟ್ಟೆ ಸುಬ್ರಮಣ್ಯ ಇತರರಿದ್ದರು.