ಹಾಪ್‌ಕಾಮ್ಸ್‌ನಿಂದ ಏರ್ಪಡಿಸಿದ್ದ ಮಾವು ಹಾಗೂ ಹಲಸು ಮೇಳದಲ್ಲಿ ಕೆ.ಎಸ್.ಈಶ್ವರಪ್ಪ, ಆರ್.ಎಂ.ಮಂಜುನಾಥ ಗೌಡ ಮಾವು ಸವಿದರು. ವಿಜಯಕುಮಾರ್, ನಾಗೇಶ್ ನಾಯ್ಕ, ಮಧು ಮುಂತಾದವರಿದ್ದರು. 
ಶಿವಮೊಗ್ಗ

ಶೀತಲೀಕರಣ ಘಟಕ ತೆರೆಯಲು ಹಾಪ್‌ಕಾಮ್ಸ್ ನಿರ್ಧಾರ I hopcoms decides

ಪ್ರಮುಖ ಮುಖ್ಯಾಂಶಗಳು

  • 10 ಕೋಟಿ ರೂ. ವೆಚ್ಚದಲ್ಲಿ ಆರಂಭಕ್ಕೆ ಚಿಂತನೆ
  • ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿಕೆ
  • ಮಾವು ಹಾಗೂ ಹಲಸು ಮೇಳಕ್ಕೆ ಶುಕ್ರವಾರ ಚಾಲನೆ
ಶಿವಮೊಗ್ಗ: ಹಾಪ್‌ಕಾಮ್ಸ್ (hopcoms) ರೈತರು ಹಾಗೂ ಗ್ರಾಹಕರ ನಡುವೆ ಕೊಂಡಿಯಂತೆ ಕೆಲಸ ನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ರೈತರ ಉತ್ಪನ್ನಗಳ ಸಂರಕ್ಷಣೆಗಾಗಿ 10 ಕೋಟಿ ರೂ. ವೆಚ್ಚದಲ್ಲಿ ಶೀತಲೀಕರಣ ಘಟಕ (cold storage) ತೆರೆಯಲು ಹಾಪ್‌ಕಾಮ್ಸ್ ನಿರ್ಧರಿಸಿರುವುದು ಉತ್ತಮ ಬೆಳವಣಿಗೆ ಎಂದು ಎಂಎಡಿಬಿ (madb) ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಹಾಪ್‌ಕಾಮ್ಸ್‌ನಿಂದ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಮಾವು ಹಾಗೂ ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಮೇಳದಲ್ಲಿ ನೇರವಾಗಿ ರೈತರು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ಅತಿ ಕಡಿಮೆ ದರದಲ್ಲಿ ಹಣ್ಣುಗಳು ಸಾರ್ವಜನಿಕರಿಗೆ ಸಿಗಲಿವೆ ಎಂದರು.
ಆಯಾ ಕಾಲಕ್ಕೆ ಅನುಗುಣವಾಗಿ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ರೈತರು ನೇರವಾಗಿ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿದಂತಾಗುತ್ತದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಆರ್ಥಿಕ ನಷ್ಟ ತಪ್ಪಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಡಾ.ಶರತ್ ಮರಿಯಪ್ಪ, ನಿರ್ದೇಶಕರಾದ ಉಂಬ್ಳೆಬೈಲು ಮೋಹನ್, ಚಂದ್ರೇಗೌಡ, ನಾಗೇಶ್‌ನಾಯ್ಕ, ನಾರಾಯಣ್, ದಿನೇಶ್ ಪಟೇಲ್, ನಾಗರಾಜ್, ಶಶಾಂಕ್, ಕಾಂತರಾಜ್, ನರಸಿಂಹಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮುಂತಾದವರಿದ್ದರು.
ರೈತರ ಪರ ಕೆಲಸ ಮಾಡುತ್ತಿದ್ದೇವೆ
ಹಾಪ್‌ಕಾಮ್ಸ್ ಮೂಲಕ ರೈತಪರ ಕೆಲಸ ಮಾಡಲಾಗುತ್ತಿದೆ. ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಈ ಮೇಳ ಅತ್ಯಂತ ಸಹಕಾರಿಯಾಗಿದೆ. ನಗರವಾಸಿಗಳಿಗೆ ಗುಣಮಟ್ಟದ ಮಾವು ಹಾಗೂ ಹಲಸು ಈ ಮೇಳದಲ್ಲಿ ಲಭ್ಯವಿದೆ. ವಾರಾಂತ್ಯದಲ್ಲಿ ಇಲ್ಲಿಗೆ ಹೆಚ್ಚಿನ ಗ್ರಾಹಕರು ಆಗಮಿಸುವ ನಿರೀಕ್ಷೆಯಿದೆ ಎಂದು ವಿಜಯಕುಮಾರ್ ಹೇಳಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ರಾಸಾಯನಿಕ ರಹಿತ ತಾಜಾ ಹಣ್ಣುಗಳು ಸಿಗಲಿ ಎಂಬ ಸದುದ್ದೇಶದಿಂದ ಆಯೋಜನೆ ಮಾಡಲಾಗಿದೆ. ವಿವಿಧ ಶ್ರೇಣಿಯಲ್ಲಿ ಬಗೆಬಗೆಯ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ರಾಮನಗರದ ಮಾವು ಬೆಳೆಗಾರರೂ ಇದರಲ್ಲಿ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.
ಅತಿ ದುಬಾರಿ ಎನಿಸಿರುವ ಮಿಯಾಜಾಕಿ ಹಣ್ಣಿನಿಂದ ಆರಂಭವಾಗಿ ಸ್ಥಳೀಯ ತಳಿಯ ಮಾವಿನ ಹಣ್ಣುಗಳು ಇಲ್ಲಿವೆ. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 60 ರೂ.ಗಳಿಂದ 2600 ರೂ.ಗಳ ವರೆಗಿನ ಮಿಯಾಜಾಕಿ ಹಣ್ಣು ಕೂಡ ಇಲ್ಲಿ ಲಭ್ಯವಿದೆ. ರಾಮನಗರದ ಬೆಳೆಗಾರರ ಸಹಯೋಗವಿದೆ. ಶಿವಮೊಗ್ಗ ಹಾಪ್‌ಕಾಮ್ಸ್ ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸದಾ ಶ್ರಮಿಸುತ್ತದೆ ಎಂದರು.

ಹಣ್ಣುಗಳ ರಾಜನ ಆಕರ್ಷಣೆ

ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿಗೆ ಮನಸೋಲದವರಿಲ್ಲ. ಮಾವು ಮಾರುಕಟ್ಟೆಗೆ ಆಗಮಿಸುವುದನ್ನು ಅಪಾರ ನಿರೀಕ್ಷೆಯಿಂದ ಕಾಯುವ ಜನರಿಗೂ ಬರವಿಲ್ಲ. ಈಗಾಗಲೇ ಮಾವಿನ ಫಸಲು ಮುಕ್ತಾಯದ ಹಂತದಲ್ಲಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಸವಿಯಬೇಕೆಂಬ ಬಯಕೆಯುಳ್ಳವರಿಗೆ ಹಾಪ್‌ಕಾಮ್ಸ್ ಆಯೋಜನೆ ಮಾಡಿರುವ ಮಾವು ಹಾಗೂ ಹಲಸಿನ ಮೇಳೆ ಅತ್ಯುಪಯುಕ್ತವಾಗಿದೆ.
ಮಾವಿನ ಹಣ್ಣುಗಳ ಪೈಕಿ ಅತಿ ದುಬಾರಿ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ಮಿಯಾಜಾಕಿಯಿಂದ ಆರಂಭವಾಗಿ ಥೈಲಾಂಡ್‌ನ ತಳಿ ಕಟೀಮಾನ್, ರೆಡ್ ಐವರಿ, ಇಮಾಂ ಪಸಂದ್, ದಶರಿ, ಕೇಸರ್, ಸಿಂಧೂರ ಹೀಗೆ ಬಗೆಬಗೆಯ ಮಾವಿನ ತಳಿಗಳು ಮೇಳದಲ್ಲಿ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿವೆ. ಶಿವಮೊಗ್ಗ ಜಿಲ್ಲೆಯ ಅನೇಕ ಪ್ರಗತಿಪರ ರೈತರು ಬೆಳೆದಿರುವ ಹಣ್ಣುಗಳು ಇಲ್ಲಿ ನೇರವಾಗಿ ಗ್ರಾಹಕರಿಗೆ ದೊರೆಯುತ್ತಿವೆ. ಮುಂಬರುವ ದಿನಗಳಲ್ಲಿ ಹಣ್ಣಿನ ಬೆಳೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದೇ ಹೇಳಬಹುದಾಗಿದೆ.

ಹಲಸಿಗೆ ಮನಸೋತ ಜನರು

ಮಲೆನಾಡಿನ ವಿವಿಧ ತಳಿಯ ಹಲಸಿನ ಹಣ್ಣುಗಳು ಈ ಮೇಳದ ಮತ್ತೊಂದು ಆಕರ್ಷಣೆಯಾಗಿದೆ. ಹಲಸಿನ ಮೇಳಕ್ಕೆ ಗೊಣಗುವವರಿಗೆಂದು ಇಲ್ಲಿ ಹಲಸಿನ ತೊಳೆಗಳನ್ನು ಬಿಡಿಸಿ ಪ್ರತ್ಯೇಕವಾಗಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡುವ ವ್ಯವಸ್ಥೆಯೂ ಇದೆ. ಗ್ರಾಹಕರು ಹಲಸಿನ ರುಚಿ ನೋಡಿ ಅದನ್ನು ಖರೀದಿಸುವ ಅವಕಾಶವೂ ಇದೆ. ಮೂರ‌್ನಾಲ್ಕು ಮಂದಿ ದಿನವಿಡೀ ಹಲಸಿನ ಹಣ್ಣನ್ನು ಬಿಡಿಸುವುದರಲ್ಲಿ ಮಗ್ನವಾಗಿದ್ದು ಅದರ ಬೇಡಿಕೆಗೆ ನಿದರ್ಶನವಾಗಿತ್ತು.

ಹಾಪ್‌ಕಾಮ್ಸ್ ಕಾಂಪೋಸ್ಟ್

ಹಾಪ್‌ಕಾಮ್ಸ್ ಇದೇ ಮೊದಲ ಬಾರಿಗೆ ರೈತರಿಗೆ ಕಾಂಪೋಸ್ಟ್ ಪೂರೈಸುವ ಕೆಲಸ ಮಾಡುತ್ತಿದೆ. ಮಾವು-ಹಲಸು ಮೇಳದಲ್ಲಿ ಈ ಕಾಂಪೋಸ್ಟನ್ನು ಪರಿಚಯಿಸುವ ಪ್ರಯತ್ನವೂ ನಡೆಯಿತು. ಕೃಷಿ ಭೂಮಿಗೆ ಅಗತ್ಯವಿರುವ ವಿವಿಧ ಪೋಷಕಾಂಶಗಳನ್ನೊಳಗೊಂಡ ಕಾಂಪೋಸ್ಟ್ ಲಭ್ಯವಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಉತ್ತಮ ಫಲಿತಾಂಶ ಬಂದಿರುವ ಅನೇಕ ನಿದರ್ಶನಗಳಿವೆ. ಇದರ ಗುಣಮಟ್ಟವನ್ನು ನಿಗದಿತವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ರೈತರಿಗೆ ಯಾವುದೇ ಅನುಮಾನ ಬೇಡ ಎಂದು ವಿಜಯಕುಮಾರ್ ಹೇಳಿದರು.
"

ಹಾಪ್‌ಕಾಮ್ಸ್ ಮೂಲಕ ಎಲ್ಲರೂ ಪಕ್ಷಾತೀತ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಮೇಳವಾಗಿದೆ. ಮಾವು ಹಾಗೂ ಹಲಸು ಎರಡೂ ಜನರ ಮನಸೂರೆಗೊಂಡವು. ಒಂದೇ ಕಡೆ ಇವರೆಡನ್ನೂ ಖರೀದಿಸುವ ಜತೆಗೆ ಬೇಕಾದ ತಳಿಯ ಆಯ್ಕೆಯೂ ಇಲ್ಲಿ ದೊರೆಯಲಿದೆ.

— ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ.