ಮೂರು ದಿನಗಳ ನಾಣ್ಯ, ನೋಟು ಹಾಗೂ ಅಂಚೆ ಚೀಟಿಗಳ ಪ್ರದರ್ಶನವನ್ನು ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಎಸ್.ಚಂದ್ರಕಾಂತ್, ವಿ.ಕೆ.ಜೈನ್, ಎಸ್.ಎಸ್.ಜ್ಯೋತಿಪ್ರಕಾಶ್ ಇದ್ದರು. 
ಶಿವಮೊಗ್ಗ

ಇತಿಹಾಸದ ಮಹತ್ವ ಸಾರುವ ಹಣದ ವಿನ್ಯಾಸ I historical money

ಪ್ರಮುಖ ಮುಖ್ಯಾಂಶಗಳು

  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅನಿಸಿಕೆ
  • ನಾಣ್ಯ, ನೋಟುಗಳು ಮತ್ತು ಅಂಚೆ ಚೀಟಿಗಳ ಪ್ರದರ್ಶನ
  • ಜನರ ಧಾರ್ಮಿಕ ಭಾವನೆ ಸಂಕೇತ
ಶಿವಮೊಗ್ಗ: ನಾಣ್ಯ (coin) ಹಾಗೂ ನೋಟುಗಳು ಆಯಾ ಕಾಲಘಟ್ಟದ ಕುರುಹುಗಳಾಗಿವೆ. ಅವುಗಳನ್ನು ಲೋಹದ ತುಂಡುಗಳೆಂದು ಕಡೆಗಣನೆ ಮಾಡುವುದು ಸರಿಯಲ್ಲ. ಅವು ಆಯಾ ಸಂದರ್ಭದ ರಾಜಕೀಯ (political) ಸ್ಥಿತಿಗತಿ, ಇತಿಹಾಸವನ್ನು ಸಾರುತ್ತವೆ. ಜನರ ಧಾರ್ಮಿಕ ಭಾವನೆಯ ಸಂಕೇತವೂ ಹೌದು ಎಂದು ಲೋಕಸಭಾ ಸದಸ್ಯ (member) ಬಿ.ವೈ.ರಾಘವೇಂದ್ರ ಹೇಳಿದರು.
ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್‌ನಿಂದ ಶುಭಮಂಗಳ ಸಮುದಾಯ ಭವನದಲ್ಲಿ ಏರ್ಪಡಿಸಿರುವ ಮೂರು ದಿನದ ರಾಷ್ಟ್ರಮಟ್ಟದ ನಾಣ್ಯ, ನೋಟುಗಳು, ಅಂಚೆ ಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ರಾಜರ ಕಾಲದ ಆರ್ಥಿಕ ಶಿಸ್ತು ಅರಿಯಲು ಪ್ರದರ್ಶನ ಪೂರಕವಾಗಿದೆ. ವಿಜಯನಗರ, ಕೆಳದಿ ಅರಸರ ಕಾಲದ ನಾಣ್ಯ ಹಾಗೂ ನೋಟುಗಳನ್ನು ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ. ಬಂಗಾರದ ನಾಣ್ಯಗಳು ವಿಶೇಷ ಆಕರ್ಷಣೆಯಾಗಿವೆ. ನಾಣ್ಯ ಹಾಗೂ ನೋಟುಗಳನ್ನು ನಿರ್ಜೀವ ಎಂದು ಅಲ್ಲಗಳೆಯಬಾರದು. ಅದು ಆ ಕಾಲದಲ್ಲಿದ್ದ ಜನರ ಭಾವನೆಯ ಪ್ರತೀಕವಾಗಿದೆ. ಅವು ಗತಕಾಲದ ಇತಿಹಾಸವನ್ನು ಅರಿಯಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ಅಧ್ಯಕ್ಷ ದೇವದಾಸ್ ಎನ್.ನಾಯಕ್, ಕಾರ್ಯದರ್ಶಿ ಎಸ್.ಚಂದ್ರಕಾಂತ್, ಜಂಟಿ ಕಾರ್ಯದರ್ಶಿ ಎಲ್.ಸುಬ್ರಹ್ಮಣ್ಯ, ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್ ಇತರರಿದ್ದರು.

ಮಕ್ಕಳಲ್ಲಿ ಹವ್ಯಾಸ ಬೆಳೆಸಿ

ನಾಣ್ಯ, ನೋಟು, ಅಂಚೆ ಚೀಟಿ ಸಂಗ್ರಹದ ಹವ್ಯಾಸವನ್ನು ಮಕ್ಕಳಲ್ಲೂ ಬೆಳೆಸಬೇಕು. ನಮ್ಮ ಸಂಸ್ಕೃತಿ, ಪ್ರಾಚೀನ ಕಾಲದ ಶ್ರೀಮಂತಿಕೆ ಪ್ರತೀಕವಾಗಿರುವ ನಾಣ್ಯ, ನೋಟುಗಳ ಬಗ್ಗೆ ಎಲ್ಲರೂ ಮಾಹಿತಿ ಪಡೆಯಬೇಕು. ಇತ್ತೀಚೆಗೆ ಲಕ್ಕುಂಡಿಯಲ್ಲಿ ಸಿಕ್ಕಿರುವ ಅಪರೂಪದ ಚಿನ್ನಾಭರಣಗಳು ಪ್ರಾಚೀನ ಸಮಾಜದ ಶ್ರೀಮಂತಿಕೆಗೆ ನಿದರ್ಶನವಾಗಿದೆ. ಮೂರು ದಿನ ಪ್ರದರ್ಶನವಾಗುತ್ತಿರುವ ವಸ್ತುಗಳು ಅತ್ಯಮೂಲ್ಯವಾದವು. ಹೀಗಾಗಿ ಭದ್ರತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಡಿ.ಎಸ್.ಅರುಣ್ ತಿಳಿಸಿದರು.

ವಿಸ್ಮಯ ಲೋಕ ಅನಾವರಣ

ಶುಭಮಂಗಳ ಸಮುದಾಯ ಭವನದಲ್ಲಿ ಎರಡು ಮಹಡಿಗಳಲ್ಲಿ ವಿಸ್ಮಯ ಲೋಕವೇ ತೆರೆದುಕೊಂಡಿವೆ. ದೇಶದ ವಿವಿಧೆಡೆಯಿಂದ ಆಗಮಿಸಿರುವ 50 ಮಂದಿ ನಾಣ್ಯ, ನೋಟು ಹಾಗೂ ಅಂಚೆಚೀಟಿಗಳ ಸಂಗ್ರಾಹಕರು ತಮ್ಮಲ್ಲಿರುವ ಅಪರೂಪ ಸಂಗ್ರಹವನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿ ಒಂದು ಸುತ್ತು ಬಂದರೆ ಇಡೀ ವಿಶ್ವವೇ ತೆರೆದುಕೊಂಡ ಅನುಭವವಾಗುತ್ತದೆ. ದಕ್ಷಿಣ ಕೊರಿಯಾ, ಒಮನ್, ಹಂಗೇರಿ, ಇರಾನ್, ಇಟಲಿ, ಫಿಲಿಪೈನ್ಸ್, ಹಾಂಗ್‌ಕಾಂಗ್, ಈಜಿಪ್ಟ್ ಮುಂತಾದ 100ಕ್ಕೂ ಹೆಚ್ಚು ದೇಶಗಳ ವಿವಿಧ ಕಾಲಘಟ್ಟದ ನಾಣ್ಯಗಳು ಇಲ್ಲಿವೆ. ಕನ್ನಡದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಜನ್ಮ ದಿನಾಂಕ, ತಿಂಗಳು, ವರ್ಷಕ್ಕೆ ಅನುಗುಣವಾದ ಸರಣಿ ಸಂಖ್ಯೆಯುಳ್ಳ ನೋಟುಗಳ ಜತೆಗೆ ಸಾಹಿತಿಗಳ ಪರಿಚಯ, ಶಿಥಿಲಾವಸ್ಥೆ ತಲುಪಿದ ಭಾರತದ ನೋಟುಗಳಿಗೆ ಆಕರ್ಷಕ ಸಾಲುಗಳು, ಭಾರತದ ವಿವಿಧ ರಾಜರಿಂದ ಆರಂಭವಾಗಿ ಇತ್ತೀಚಿನವರೆಗೆ ಮುದ್ರಿತವಾದ ನೋಟುಗಳು, ಸಿದ್ಧಪಡಿಸಿದ ನಾಣ್ಯಗಳನ್ನು ಕಾಣಬಹುದಾಗಿದೆ. ತರೀಕೆರೆಯ ನಾಗಾರ್ಜುನ ಎಂಬುವರು 10, 5 ಹಾಗೂ ಒಂದು ರೂ. ಮುಖ ಬೆಲೆ ನೋಟುಗಳನ್ನು ಸರಣಿ ಸಂಖ್ಯೆಯಲ್ಲಿ ವಿಶೇಷ ರೀತಿಯಲ್ಲಿ ಜೋಡಿಸಿರುವುದು ಗಮನಸೆಳೆಯುತ್ತದೆ.