ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಸಂಬಂಧ ಬಿ.ವೈ.ರಾಘವೇಂದ್ರ ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗಮನಸೆಳೆದರು. 
ಶಿವಮೊಗ್ಗ

ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿಯೇ ಆಗಲಿ I highcourt bench

ಪ್ರಮುಖ ಮುಖ್ಯಾಂಶಗಳು

  • ಇದರಿಂದ ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲ
  • ರಾಜ್ಯಪಾಲರಿಗೆ ಸಂಸದ ಬಿವೈಆರ್ ಮನವಿ
ಶಿವಮೊಗ್ಗ: ಮಲೆನಾಡು (malenadu) ಹಾಗೂ ಮಧ್ಯ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾದ ಶಿವಮೊಗ್ಗದಲ್ಲೇ ಹೈಕೋರ್ಟ್ (high court) ಸಂಚಾರಿ ಪೀಠ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಂಗಳವಾರ ರಾಜ್ಯಪಾಲ (governor) ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದರು.
ಲೋಕ ಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ರಾಘವೇಂದ್ರ ಅವರು, ಹೈಕೋರ್ಟ್ ಪೀಠಕ್ಕಾಗಿ ಶಿವಮೊಗ್ಗದಲ್ಲಿ ನಡೆದಿದ್ದ ದೀರ್ಘ ಹೋರಾಟವನ್ನು ವಿವರಿಸಿದರು. ಇಲ್ಲಿ ಪೀಠ ಸ್ಥಾಪನೆಗೆ ಪೂರಕವಾಗಿರುವ ಭೌಗೋಳಿಕ ಅಂಶಗಳನ್ನು ಗಮನಕ್ಕೆ ತಂದರು. ಶೈಕ್ಷಣಿಕ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿ ಶಿವಮೊಗ್ಗ ಅಭಿವೃದ್ಧಿ ಹೊಂದಿರುವುದನ್ನು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿ ಮಲೆನಾಡು ಮತ್ತು ಮಧ್ಯ ಕರ್ನಾಟಕ ಪ್ರದೇಶದ ಜನರಿಗೆ ಹಾಗೂ ನ್ಯಾಯಾಂಗ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದರು.
ಬಿವೈಆರ್ ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಉಪಸ್ಥಿತರಿದ್ದು ರಾಘವೇಂದ್ರ ಅವರ ಬೇಡಿಕೆಯನ್ನು ಅನುಮೋದಿಸಿದರು.
ರಾಜ್ಯಪಾರಿಗೆ ವಿವರಣೆ
ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗುವವರೆಗೆ ಹೈಕೋರ್ಟ್ ಪ್ರಧಾನ ಪೀಠದಿಂದ ಬೇರ್ಪಡಿಸುವುದು ಬೇಡ. ವಕೀಲರು, ನ್ಯಾಯ ಬಯಸುವ ಸಾರ್ವಜನಿಕರು ಬೆಂಗಳೂರಿಗೆ ಸುಲಭವಾಗಿ ತಲುಪಬಹುದು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಂಬಂಧ ಕೇಳಿ ಬಂದ ಆಗ್ರಹಕ್ಕೆ ಮಲೆನಾಡು ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂಬ ಸಂಗತಿಯನ್ನು ರಾಜ್ಯಪಾಲರ ಗಮನಕ್ಕೆ ಬಿವೈಆರ್ ತಂದರು.