ವಿಶ್ವ ಹಿಂದೂ ಪರಿಷದ್ ಪ್ರಮುಖ್ ರಮೇಶ್ ಬಾಬು ಜಾಧವ್ ಮಾತನಾಡಿದರು. ಬಜರಂಗದಳದ ಪ್ರಾಂತ್ಯ ಸುರಕ್ಷಾ ಪ್ರಮುಖ್ ರಾಜೇಶ್ ಗೌಡ, ಮಾತೃ ಶಕ್ತಿ ಪ್ರಮುಖ್ ಶಕುಂತಲಾ ಸುದ್ದಿಗೋಷ್ಠಿಯಲ್ಲಿದ್ದರು.
- ಹಿಜಾಬ್ ಧರಿಸಲು ಅವಕಾಶ ನೀಡಿದರೆ ಕೇಸರಿ ಶಾಲು ವಿತರಿಸುತ್ತೇವೆ
- ವಿಶ್ವ ಹಿಂದೂ ಪರಿಷದ್ ಪ್ರಮುಖ್ ರಮೇಶ್ ಬಾಬು ಜಾಧವ್ ಎಚ್ಚರಿಕೆ
ಶಿವಮೊಗ್ಗ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್( Hijab) ಧರಿಸಲು ಅವಕಾಶ ನೀಡಿದರೆ ಇನ್ಮುಂದೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕೇಸರಿ ಶಾಲು ಹಾಗೂ ತ್ರಿಶೂಲವನ್ನು ನೀಡಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಮುಖ್ ರಮೇಶ್ ಬಾಬು ಜಾಧವ್ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ 2022ರ ಹಿಜಾಬ್ ನಿಷೇಧ ಆದೇಶ ಹಿಂಪಡೆದಿದೆ. ಸರ್ಕಾರ ಈ ರೀತಿ ಕಾನೂನು ಬದಲಾವಣೆ ಮಾಡುವುದರಿಂದ ರಾಜ್ಯದ ಎಲ್ಲ ಶಾಲಾ ಕಾಲೇಜು(School-College)ಗಳ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ನಮ್ಮ ಧರ್ಮದಲ್ಲಿ ಗುರುಕುಲ ಇದ್ದ ಕಾಲದಿಂದಲೂ ಸಹ ಸಮವಸ್ತ್ರ ಪದ್ಧತಿ ಜಾರಿಯಲ್ಲಿತ್ತು. ಬ್ರಿಟಿಷರು ಸಹ ಅದನ್ನೇ ಪಾಲನೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರವು ಎಲ್ಲವನ್ನೂ ತಿರುಚಿ, ಒಂದು ಧರ್ಮವನ್ನು ಓಲೈಸಲು ಈ ರೀತಿ ಮಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸರ್ಕಾರ ಏಕೆ ಈ ರೀತಿ ಮಕ್ಕಳಲ್ಲಿ ಗೊಂದಲ ಸೃಷ್ಟಿಸುತ್ತಿದೆಯೋ ತಿಳಿಯುತ್ತಿಲ್ಲ. ಹಿಜಾಬ್‌ಗೆ ಅನುಮತಿ ನೀಡಿದ್ದಾರೆ ಎಂದಾದರೆ, ನಾವು ಇನ್ಮುಂದೆ ಜನಿವಾರವನ್ನು ಒಳಭಾಗದಲ್ಲಿ ಧರಿಸುವುದಕ್ಕಿಂತ ಮೇಲ್ಭಾಗದಲ್ಲಿ ಹಾಕಿಕೊಂಡು ಬರುತ್ತೇವೆ. ಅಲ್ಲದೆ ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು(Saffron Shawl)ಗಳನ್ನು ವಿತರಿಸುತ್ತೇವೆ. ಮುಂದಿನ ದಿನಗಳಲ್ಲಿ ತ್ರಿಶೂಲಗಳನ್ನೂ ಸಹ ನೀಡುತ್ತೇವೆ ಎಂದರು.