ಸಾಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗಾಂಧಿನಗರ ನಿವಾಸಿಗಳು ಎಸಿ ವೀರೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಮಂಜುನಾಥ, ಎಸ್.ವಿ.ಕೃಷ್ಣಮೂರ್ತಿ, ಹಿತಕರ ಜೈನ್, ಸುಂದರ ರಾಜ್ ಇತರರಿದ್ದರು.
ಸಾಗರ: ಮಾರಿಕಾಂಬೆ ಜಾತ್ರೆ ಸಂದರ್ಭ ಗಾಂಧಿನಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಅವಕಾಶ ನೀಡದಂತೆ ಗಾಂಧಿನಗರ ಬಡಾವಣೆ ನಿವಾಸಿಗಳು ಎಸಿ ವೀರೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು.
ಹೆಲಿ ಟೂರಿಸಂಗಾಗಿ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸುತ್ತಿರುವುದು ಗಮನಕ್ಕೆ ಬಂದಿದೆ. ಹೆಲಿಕಾಪ್ಟರ್ ಟೇಕಾಫ್ ಮತ್ತು ಲ್ಯಾಂಡಿಂಗ್ ವೇಳೆ ಸದ್ದು ಮಾಡುವ ಜತೆಗೆ ವಿಪರೀತ ಧೂಳು ಉಂಟಾಗಿ ಸ್ಥಳೀಯರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿಕೊಟ್ಟರು.
ಸ್ಥಳೀಯ ನಿವಾಸಿಗಳಿಗೆ ಇರುವುದು ಇದೊಂದೇ ಮೈದಾನ. ಮಹಿಳೆಯರು, ವೃದ್ಧರು ಪ್ರತಿದಿನ ಬೆಳಗ್ಗೆ- ಸಂಜೆ ವಾಯುವಿಹಾರ ಮಾಡುತ್ತಾರೆ. ಮೈದಾನಕ್ಕೆ ಹೊಂದಿಕೊಂಡಂತೆ ಶಿವಪ್ಪಲಿಂಗಪ್ಪ ಪ್ರೌಢಶಾಲೆ, ಎದುರು ಭಾಗದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನವಿದೆ. ಸುತ್ತಲೂ ನೂರಾರು ಮನೆಗಳು ಇವೆ. ಇಂತಹ ಕಡೆ ಹೆಲಿಪ್ಯಾಡ್ ನಿರ್ಮಿಸಿದರೆ ಸಮಸ್ಯೆಗಳಾಗಲಿವೆ. ಈ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಅನುಮತಿ ಕೊಡಬಾರದು ಎಂದು ಒತ್ತಾಯಿಸಿದರು.
ಮಂಜುನಾಥ ಜೇಡಿಕುಣಿ, ಎಸ್.ವಿ.ಹಿತಕರ ಜೈನ್, ಎಸ್.ವಿ.ಕೃಷ್ಣಮೂರ್ತಿ, ಸುಂದರ ರಾಜ್, ವಿಶ್ವೇಶ್ವರಯ್ಯ, ಮಾ.ಸ.ನಂಜುಂಡಸ್ವಾಮಿ, ಮೋಹನ್ ಪ್ರಕಾಶ್, ಸುರೇಶ್, ಗಣಪತಿ, ನಂದಕಿಶೋರ್ ಇತರರಿದ್ದರು.