ಹೊಳಲೂರು ಸಮೀಪದ ಬುಳ್ಳಾಪುರದ ಹಾನಿ ಪ್ರದೇಶಕ್ಕೆ ಶಾಸಕಿ ಶಾರದಾ ಪೂರ‌್ಯಾನಾಯ್ಕ ಭೇಟಿ ನೀಡಿದರು.
ಹೊಳೆಹೊನ್ನೂರು: ಗಾಳಿ ಹಾಗೂ ಮಳೆ ಆರ್ಭಟ ಮುಂದುವರಿದಿದ್ದು ಸೋಮವಾರ ಸಂಜೆ ಬಿರುಗಾಳಿ ಹಾಗೂ ಭಾರಿ ಮಳೆಯಿಂದಾಗಿ ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಅಪಾರ ಬೆಳೆ ಹಾಗೂ ಆಸ್ತಿ ಹಾನಿಯಾಗಿದೆ.
ದಿನವಿಡೀ ಉಷ್ಣ ವಾತಾವರಣ ಇದ್ದು ಸಂಜೆ ಆಗುತ್ತಿದ್ದಂತೆ ತಣ್ಣನೆ ಗಾಳಿಯೊಂದಿಗೆ ತುಂತುರು ಮಳೆ ಆರಂಭವಾಯಿತು. ಕ್ರಮೇಣ ಬಿರುಸು ಪಡೆದು ಮಿಂಚು, ಗುಡುಗು ಸಿಡಿಲಿನೊಂದಿಗೆ ಭರ್ಜರಿ ಮಳೆ ಸುರಿಯಿತು. ಅಡಿಕೆ ಹಾಗೂ ತೆಂಗಿನ ಹಿಂಗಾರಗಳು ಬಿರುಗಾಳಿಗೆ ತರಗೆಲೆಗಳಂತೆ ಉದುರಿವೆ.
ಕಟಾವಿಗೆ ಬಂದಿದ್ದ ಭತ್ತ ನೆಲಕಚ್ಚಿದೆ. ಅನೇಕ ಮನೆಗಳ ಛಾವಣಿ, ಹೆಂಚು ಹಾಗೂ ತಗಡುಗಳು ದೂರಕ್ಕೆ ಹಾರಿ ಬಿದ್ದಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅಲ್ಲದೆ ಭದ್ರಾವತಿ ರಸ್ತೆಯ ಅಗಸನಹಳ್ಳಿ ಗ್ರಾಮದಿಂದ ತಳ್ಳಿಕಟ್ಟೆ ಗ್ರಾಮದವರೆಗೆ ರಸ್ತೆ ಇಕ್ಕೆಲಗಳಲ್ಲಿದ್ದ ಸಾಲು ಮರಗಳು ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ತಂತಿ ಹರಿದುಬಿದ್ದಿವೆ. ಪರಿಣಾಮ ಗ್ರಾಮಗಳಲ್ಲಿ ರಾತ್ರಿ ಇಡೀ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.
ಮೆಸ್ಕಾಂ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಕೆಲ ಗ್ರಾಮಗಳಿಗೆ ಲೈಟಿಂಗ್ ಲೈನ್ ಚಾರ್ಚ್ ಮಾಡಿದರು. ಇನ್ನೂ ಕೆಲ ಗ್ರಾಮಗಳಿಗೆ ಸೋಮವಾರ ಸಂಜೆವರೆಗೆ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ. ಭದ್ರಾವತಿ ತಾಲೂಕಿನ ಕೆರೆಬೀರನಹಳ್ಳಿ, ಎಮ್ಮೆಹಟ್ಟಿ, ಹೊಳೆಬೆಳಗಲು, ಅಗಸನಹಳ್ಳಿ, ದಾಸರಕಲ್ಲಹಳ್ಳಿ, ಅರದೋಟ್ಲು, ನಾಗತಿಬೆಳಗಲು, ತಳ್ಳೀಕಟ್ಟೆ ಹಾಗೂ ಶಿವಮೊಗ್ಗ ತಾಲೂಕಿನ ಬೆಳಗಲು, ಚಿಕ್ಕೂಡ್ಲಿ, ಕಾಟೀಕೆರೆ, ವೆಂಕಟಾಪುರ, ಬಿ.ಬೀರನಹಳ್ಳಿ, ಬುಳ್ಳಾಪುರ, ಬೇಡರಹೊಸಳ್ಳಿ, ಗೊರವಿನಕಟ್ಟೆ ಗ್ರಾಮ ಸೇರಿದಂತೆ ಅನೇಕ ಭಾಗದಲ್ಲಿ ಅತಿ ಹೆಚ್ಚು ಹಾನಿಯಾಗಿದೆ.