ಸಾಗರ ತಾಲೂಕಿನ ಸಿರಿವಂತೆಯಲ್ಲಿ ಚಿತ್ರಸಿರಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಬಿ.ಆರ್.ಜಯಂತ್, ಚಂದ್ರಶೇಖರ ಸಿರಿವಂತೆ, ಡಾ. ಅನ್ನಪೂರ್ಣಾ, ಡಾ. ಪ್ರಸನ್ನ ಇತರರಿದ್ದರು.
ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಡಿಕೆಯಂತೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡುತ್ತವೆ. ಅದೊಂದು ಯಾಂತ್ರಿಕವಾದ ಕಾರ್ಯಕ್ರಮದಂತೆ ಇರುತ್ತದೆ. ಆದರೆ ಚಿತ್ರಸಿರಿ ಸಿರಿವಂತೆ ಸಂಸ್ಥೆ ನೀಡುತ್ತಿರುವ ಪ್ರಶಸ್ತಿ ಅದೆಲ್ಲಕ್ಕಿಂತಲೂ ಮಿಗಿಲು ಮತ್ತು ಅದೊಂದು ಹೃದಯವಂತಿಕೆಯಿಂದ ಕೂಡಿರುತ್ತದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ತಾಲೂಕಿನ ಸಿರಿವಂತೆ ಗ್ರಾಮದ ‘ಚಿತ್ರಸಿರಿ’ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಸಿರಿವಂತೆ ಚಂದ್ರಶೇಖರ್ ಅವರು ಪತ್ನಿ ನೆನಪಿನಲ್ಲಿ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಪುರಸ್ಕಾರ ನೀಡುತ್ತಿರುವುದು ಶ್ರೇಷ್ಠವಾದ ಕೆಲಸ ಎಂದರು.
ಎಲ್ಲರ ನಡುವೆ ಇರುವ ಸಾದಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ. ಆ ಕೆಲಸವನ್ನು ಚಿತ್ರಸಿರಿ ಸಂಸ್ಥೆ ಅತ್ಯಂತ ನಿಷ್ಠೆಯಿಂದ ಮಾಡುತ್ತಿದೆ. ಪ್ರೀತಿ, ವಿಶ್ವಾಸ, ಸ್ನೇಹವೇ ಬದುಕಿನಲ್ಲಿ ದೊಡ್ಡ ಸಂಪತ್ತು. ಅದನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸಾಕ್ಷೀಕರಿಸುವ ಕೆಲಸ ಇಲ್ಲಿ ನಡೆದಿದೆ. ಇದೊಂದು ಮಾದರಿ ಕೆಲಸ. ನಾವು ಸಮಾಜದಲ್ಲಿ ದುರ್ಬಲರು, ಹಿಂದುಳಿದವರು, ಸಣ್ಣ ಸಮುದಾಯಗಳ ಪರವಾಗಿ ಧ್ವನಿಯಾಗುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಕೆರೆಕೈ ಮಾತನಾಡಿ, ಹೋರಾಟದ ಸಂದರ್ಭದಲ್ಲಿ ನಾವು ಕಾಗೋಡು ತಿಮ್ಮಪ್ಪ ಮತ್ತು ಬಿ.ಆರ್.ಜಯಂತ್ ಅವರ ಬದ್ಧತೆಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. 60 ವರ್ಷಗಳ ಕಾಲ ದುರ್ಬಲರು, ಭೂಹೀನರಿಗಾಗಿ ಅವರು ಮಾಡಿದ ಹೋರಾಟ ಅತ್ಯಂತ ದೊಡ್ಡದು ಎಂದರು.
ಸಾಮಾಜಿಕ ಕಾರ್ಯಕರ್ತೆ, ವಕೀಲೆ ಸರೋಜಾ ಪಿ. ಚಂಗೊಳ್ಳಿ ಅವರಿಗೆ ಸಿರಿಗೌರಿ ಪ್ರಶಸ್ತಿ, ಅಂತಾರಾಷ್ಟ್ರೀಯ ಯೋಗಪಟು ನಮನಾಗೆ ಚಿಗುರು ಸಿರಿಗೌರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲ ವಿಜ್ಞಾನಿ ಅಭಿನಂದನ್ ಸಾಗರ, ರಕ್ತದಾನಿ ಹಾಲೇಶ್ ಭದ್ರಾವತಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಕೆರೆಕೈ, ಯೋಗಶಿಕ್ಷಕ ಶ್ರೀಧರಮೂರ್ತಿ, ಯೋಗಪಟುಗಳಾದ ಶೈಲಜಾ ಹಾಗೂ ಜಯಮ್ಮ ಅವರನ್ನು ಅಭಿನಂದಿಸಲಾಯಿತು.
ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಡಾ. ಅನ್ನಪೂರ್ಣಾ ಅಭಿನಂದನಾ ಭಾಷಣ ಮಾಡಿದರು. ಸಿರಿವಂತೆ ಚಿತ್ರಸಿರಿ ಸಂಸ್ಥೆ ಮುಖ್ಯಸ್ಥ ಚಂದ್ರಶೇಖರ್ ಸಿರಿವಂತೆ , ಡಾ. ಪ್ರಸನ್ನ, ಜಗದೀಶ್ ಸಂಪಳ್ಳಿ ಇತರರಿದ್ದರು.