ಸೊರಬದ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಮಾತನಾಡಿದರು. ಗಣಪತಿ ಹುಲ್ತಿಕೊಪ್ಪ, ಜಯಶೀಲಗೌಡ, ಮಂಜುನಾಥ್ ಇತರರಿದ್ದರು.
ಸೊರಬ: ವಚನ ಶ್ರಾವಣ ಜ್ಞಾನದ ಯಜ್ಞವಿದ್ದಂತೆ. ಜಪ ಯಜ್ಞ ಜ್ಞಾನವನ್ನು ವೃದ್ಧಿಸುತ್ತದೆ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾನುಕೇರಿ ಮಠದಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್, ಅಕ್ಕನ ಬಳಗ, ಟೌನ್ ವೀರಶೈವ ಸಮಾಜದಿಂದ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯಜ್ಞದಿಂದ ಬುದ್ಧಿ, ವಿವೇಕ, ವೈಚಾರಿಕತೆ ಮೂಡುತ್ತದೆ. ಇಂತಹ ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಚಿಂತನೆ ತಲುಪಿಸುತ್ತದೆ ಎಂದು ತಿಳಿಸಿದರು.
ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಗಣಪತಿ ಎಚ್. ಹುಲ್ತಿಕೊಪ್ಪ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಶರಣರು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ವಚನಗಳ ಪ್ರಾಮುಖ್ಯತೆ, ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದರು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ ಮಾತನಾಡಿ, ವಚನ ಶ್ರಾವಣ ಸಂಜೆ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಸಂದೇಶ ಮೂಡುತ್ತಿದೆ. ಅಕ್ಕನ ಬಳಗದ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಅಕ್ಕನ ಜೀವನ ಮತ್ತು ಅನುಭಾವ ಸಿದ್ಧಾಂತ ಕುರಿತು ಉಪನ್ಯಾಸಕಿ ಪ್ರಿಯದರ್ಶಿನಿ ಉಪನ್ಯಾಸ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್, ಟೌನ್ ವೀರಶೈವ ಸಮಾಜದ ಅಧ್ಯಕ್ಷ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಚಂದನ್, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್ ಇದ್ದರು.