ಬಂಜಾರ ಸಮಾಜದವರ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಂಬಂಧಿಸಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಭುಲಿಂಗ ಕವಳಿಕಟ್ಟಿ, ವಿ.ಅಭಿಷೇಕ್, ಎಂ.ಎಸ್.ಸಂತೋಷ್ ಸಮಾಲೋಚನಾ ಸಭೆ ನಡೆಸಿದರು.
- ವಿವಿಧ ಇಲಾಖೆ ಸೌಲಭ್ಯಗಳ ಕಾರ್ಯಾಗಾರ
- ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ
ಶಿವಮೊಗ್ಗ: ರಾಜ್ಯ ಕಾನೂನು (law) ಸೇವೆಗಳ ಪ್ರಾಧಿಕಾರವು ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ನಗರದ ಬಾಲರಾಜ ಅರಸ್ ರಸ್ತೆ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಮೇ 30ರಂದು ಜಿಲ್ಲೆಯ ಬಂಜಾರ ಸಮುದಾಯದವರಿಗೆ ಉಚಿತ ಆರೋಗ್ಯ (health) ತಪಾಸಣಾ ಶಿಬಿರ (camp) ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಶಿಬಿರದ ಸಿದ್ಧತೆ ಕುರಿತು ಚರ್ಚಿಸಿದ ಜಿಲ್ಲಾಧಿಕಾರಿ, ಆರೋಗ್ಯ ತಪಾಸಣಾ ಶಿಬಿರ ಸಂದರ್ಭದಲ್ಲಿ ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಸಿ ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ಬಂಜಾರ ಸಮುದಾಯಕ್ಕೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದರು.
ವಿವಿಧ ಇಲಾಖೆ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುತ್ತದೆ. ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಸೌಲಭ್ಯ, ಅರ್ಹರಿಗೆ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಬಂಜಾರ ಸಮುದಾಯದವರು ತಾಂಡಾಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರೋಪಾಯ ಒದಗಿಸಲಾಗುವುದು ಎಂದರು.
ತಾಂಡಾ ಅಭಿವೃದ್ಧಿ ನಿಗಮದಿಂದ ಬಂಜಾರ ಸಮುದಾಯದವರ ಉಡುಗೆ-ತೊಡುಗೆ, ಸಾಂಪ್ರದಾಯಿಕ ಶೈಲಿ ವಸ್ತ್ರಗಳು, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಇರಲಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಜಾತಿ ನಿಂದನೆ ಕಾಯ್ದೆ, ಅಂತರ್ಜಾತಿ ವಿವಾಹ, ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ, ಬಾಣಂತಿಯರಿಗೆ ಒದಗಿಸಲಾಗುವ ಸೌಲಭ್ಯ, ಪೌಷ್ಠಿಕ ಆಹಾರ, ಪೋಷಣ್ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
"
ಬಂಜಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಮೂರ‌್ನಾಲ್ಕು ಗ್ರಾಮಗಳನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ದತ್ತು ತೆಗೆದುಕೊಂಡು, ಅಲ್ಲಿ ಕಾನೂನು ಶಿಬಿರ ನಡೆಸಲಾಗುವುದು. ಕಾನೂನು ವಿದ್ಯಾರ್ಥಿಗಳು ಮತ್ತಿತರ ಸೇವೆಗಳನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗುತ್ತದೆ.
— ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾಧಿಕಾರಿ