ಶಿವಮೊಗ್ಗದಲ್ಲಿ ಮನೆಗೊಂದು ಗ್ರಂಥಾಲಯ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಡಿ.ಸುಧಾಕರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಿಮ್ಮನೆ ರತ್ನಾಕರ್, ಡಿ.ಮಂಜುನಾಥ್, ಡಾ.ಮಾನಸಾ, ಅಕ್ಷತಾ ಹುಂಚದಕಟ್ಟೆ, ಬಿ.ಚಂದ್ರೇಗೌಡ, ಆರ್.ರತ್ನಯ್ಯ, ಡಾ.ಎಚ್.ಟಿ.ಕೃಷ್ಣಮೂರ್ತಿ ಇದ್ದರು.
- ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮತ
- ಮನೆಗೊಂದು ಗ್ರಂಥಾಲಯ ಅಭಿಯಾನದ ಕರಪತ್ರ ಬಿಡುಗಡೆ
ಶಿವಮೊಗ್ಗ: ದ್ವೇಷಕ್ಕೆ ಅಂತ್ಯವಿಲ್ಲ. ಆದರೆ ಸಾಹಿತ್ಯ ಅದಕ್ಕೆ ಔಷಧವಾಗಬಲ್ಲದು. ಮನೆಗೊಂದು ಗ್ರಂಥಾಲಯ (library) ಅಭಿಯಾನ ಕೇವಲ ಯೋಜನೆ (schema) ಯಲ್ಲ. ಜ್ಞಾನ ಮತ್ತು ಮಾನವೀಯತೆಯ ಬೆಳಕನ್ನು ಪ್ರತಿ ಮನೆಯೊಳಗೆ ತಲುಪಿಸುವ ಸಾಂಸ್ಕೃತಿಕ (cultural) ಚಳವಳಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿಯಿಂದ ನಗರದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಮನೆಗೊಂದು ಗ್ರಂಥಾಲಯ ಅಭಿಯಾನದ ಕರಪತ್ರ ಬಿಡುಗಡೆ ಹಾಗೂ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ, ಹಿಂಸೆ, ಅಸಹಿಷ್ಣುತೆಯಿಂದ ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗಿದೆ. ಪದವಿ, ಪಾಂಡಿತ್ಯಗಳು ಹೆಚ್ಚಾದರೂ ಮನುಷ್ಯತ್ವ ಕಡಿಮೆ ಅಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾಹಿತ್ಯ ಓದಿನ ಸಂಸ್ಕೃತಿ ಮನುಷ್ಯನ ಮನಸ್ಸನ್ನು ಮೃದುಗೊಳಿಸಿ, ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆಯ ಭಾವನೆ ಬೆಳೆಸುತ್ತದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಪುಸ್ತಕ ಸಂಸ್ಕೃತಿಯನ್ನು ಮನೆಮನೆಗೆ ತಲುಪಿಸುವ ಕಾರ್ಯ ಇಂದು ಅವಶ್ಯವಾಗಿದೆ. ಹೊಸ ತಲೆಮಾರಿನಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ, ವಾಚನಾಭಿರುಚಿ ಕಮ್ಮಟ, ಓದು ಕನ್ನಡಿಗ ಯೋಜನೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಒಳಗೊಂಡಂತೆ 10 ಸದಸ್ಯರ ಜಾಗೃತ ಸಮಿತಿಯನ್ನು ರಚಿಸಿ, ಪುಸ್ತಕ ಖರೀದಿ ಮತ್ತು ಓದುವ ಸಂಸ್ಕೃತಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಾ ಮಾತನಾಡಿ, ಮನೆಗೊಂದು ಗ್ರಂಥಾಲಯ ದೇವರ ಮನೆಯಷ್ಟೇ ಪವಿತ್ರವಾದ ಜ್ಞಾನದ ಕೇಂದ್ರವಾಗಬೇಕು. ದಿನಸಿ ಸಾಮಗ್ರಿ ಪಟ್ಟಿಯಲ್ಲಿ ಪುಸ್ತಕಕ್ಕೂ ಸ್ಥಾನ ಸಿಗಬೇಕು ಎಂದು ಹೇಳಿದರು.
ಪುಸ್ತಕ ಪ್ರಾಧಿಕಾರದ ಸದಸ್ಯೆ ಅಕ್ಷತಾ ಕೆ. ಹುಂಚದಕಟ್ಟೆ, ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಸಾಹಿತಿಗಳಾದ ಬಿ.ಚಂದ್ರೇಗೌಡ, ಡಾ. ಎಚ್.ಟಿ.ಕೃಷ್ಣಮೂರ್ತಿ, ಷಣ್ಮುಖಾಚಾರ್, ಆರ್.ರತ್ನಯ್ಯ, ರೇವಣಪ್ಪ ಬಿದರಗೆರೆ, ಭದ್ರಾವತಿ ರೇವಣಪ್ಪ ಉಪಸ್ಥಿತರಿದ್ದರು.
ಜಿಲ್ಲಾ ಜಾಗೃತ ಸಮಿತಿ
ಮನೆಗೊಂದು ಗ್ರಂಥಾಲಯ ಅಭಿಯಾನ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಂಚಾಲಕರಾಗಿ ಡಿ. ಮಂಜುನಾಥ, ಸದಸ್ಯರಾಗಿ ಡಿ. ಗಣೇಶ್, ಪರಶುರಾಮ ಮಟ್ಟೇರ, ಮೋಹನ್‌ಕುಮಾರ್, ಕೆ.ಎಸ್.ಹುಚ್ರಾಯಪ್ಪ, ಶಂಕರ್ ಶೇಟ್, ಡಾ. ಪ್ರಸನ್ನ, ಗಣೇಶಮೂರ್ತಿ ನಾಗರಕೊಡಿಗೆ ಮತ್ತು ಗಾಯತ್ರಿ ಶೇಷಗಿರಿ ಕಾರ್ಯನಿರ್ವಹಿಸಲಿದ್ದಾರೆ.