ತೀರ್ಥಹಳ್ಳಿ ತಾಲೂಕು ಆಡಳಿತದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕು ಕಚೇರಿ ಎದುರು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕುರುವಳ್ಳಿ ಬಂಡೆ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪ್ರಭಾಕರ್, ಗೀತಾ ರಮೇಶ್, ಮಂಜುಳಾ ನಾಗೇಂದ್ರ, ಕೆಸ್ತೂರು ಮಂಜುನಾಥ್ ಇತರರಿದ್ದರು.
ತೀರ್ಥಹಳ್ಳಿ: ಸ್ಥಳೀಯ ಶಾಸಕರ ಆಪ್ತ ಸಹಾಯಕರ ಮಾತು ಕೇಳಿ ತಾಲೂಕು ಆಡಳಿತ ಕುರುವಳ್ಳಿ ಬಂಡೆ ಕಾರ್ಮಿಕರ ಕೆಲಸಕ್ಕೆ ಅಡ್ಡಿ ಪಡಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಸೋಮವಾರ ಮೇಲಿನಕುರುವಳ್ಳಿಯಿಂದ ತಾಲೂಕು ಕಚೇರಿಗೆ ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು.
ಕೆಲಸ ಮಾಡದಿದ್ದರೆ ಕಾರ್ಮಿಕರ ಕುಟುಂಬಗಳು ಉಪವಾಸ ಬೀಳಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ಮಂಗಳವಾರದಿಂದ ಈ ಮೊದಲಿನಂತೆ ಕಾರ್ಮಿಕರಿಗೆ ಬಂಡೆಯಲ್ಲಿ ಕೆಲಸ ಮಾಡಲು ಅಡ್ಡಿಪಡಿಸಬಾರದು. ಇಲ್ಲವಾದಲ್ಲಿ ಬೇರೆ ರೀತಿಯ ಪ್ರತಿಭಟನೆ ಎದುರಿಸಬೇಕಾದೀತು ಎಂದು ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.
ಶಾಸಕರ ಆಪ್ತ ಸಹಾಯಕರ ಮಾತಿನಂತೆ ಕುರುವಳ್ಳಿ ಬಂಡೆಯಲ್ಲಿ ಡೈನಮೇಟ್ ಸಿಡಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಕೇಳಿ 15 ಮಂದಿ ಕಾರ್ಮಿಕರ ವಿರುದ್ಧ ದುರುದ್ದೇಶದಿಂದ ದೂರು ದಾಖಲಿಸಲಾಗಿದೆ. ರಾಜಧಾನಿವರೆಗೂ ಈ ಸುದ್ದಿಯನ್ನು ಹಬ್ಬಿಸಲಾಗಿದೆ. ಶಾಸಕರ ಆಪ್ತ ಸಹಾಯಕರ ವಿರುದ್ಧ ಕಾರ್ಮಿಕರು ನೀಡಿರುವ ದೂರಿನ ಬಗ್ಗೆ ಈವರೆಗೆ ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಕುರುವಳ್ಳಿ ಬಂಡೆಯನ್ನು ನಂಬಿ ಹಲವು ಕುಟುಂಬಗಳು ಬದುಕುತ್ತಿವೆ. ಆರಗ ಜ್ಞಾನೇಂದ್ರ ಅಧಿಕಾರಕ್ಕೆ ಬಂದಾಗಲೆಲ್ಲ ಕಾರ್ಮಿಕರಿಗೆ ಹಿಂಸೆ ನೀಡುತ್ತಿದ್ದಾರೆ. ಬಿಜೆಪಿಯವರು ಮಾಡುವ ಯಾವುದೇ ಅಕ್ರಮ ದಂಧೆಗಳಿಗೂ ಅಡಚಣೆ ಆಗುವುದಿಲ್ಲ. ಕಾರ್ಮಿಕರಿಗೆ ಅಡ್ಡಿಪಡಿಸಿದರೆ ಮುಂದಿನ ಸೋಮವಾರ ಕಾರ್ಮಿಕರ ಕುಟುಂಬ ಸಹಿತ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಎಸ್. ರಂಜಿತ್ ಮಾತನಾಡಿ, ವಿವಾದಿತ ಬಂಡೆ ಪ್ರದೇಶದ ಬಗ್ಗೆ ಇತ್ಯರ್ಥಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಕಾನೂನು ಪಾಲನೆಯೊಂದಿಗೆ ಕಲ್ಲುಗಳ ಸಾಗಣೆ ವೇಳೆ ಸಾರ್ವಜನಿಕರಿಗೆ ಅಪಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಮೇಲಿನಕುರುವಳ್ಳಿ ಗ್ರಾಪಂ ಅಧ್ಯಕ್ಷ ಪ್ರಭಾಕರ್, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯೆ ಮಂಜುಳಾ ನಾಗೇಂದ್ರ, ಕೆಸ್ತೂರು ಮಂಜುನಾಥ್, ಕೆಳಕೆರೆ ಪೂರ್ಣೇಶ್, ಅಮ್ರಪಾಲಿ ಸುರೇಶ್, ಅಮರನಾಥ ಶೆಟ್ಟಿ ಇದ್ದರು.