ಮೆಗ್ಗಾನ್ ಆಸ್ಪತ್ರೆಯಲ್ಲಿ ಎಚ್1ಎನ್1 ಚಿಕಿತ್ಸೆಗೆ ಮೀಸಲಿಡಲಾದ ಪ್ರತ್ಯೇಕ ವಾರ್ಡ್.
- ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್
- ಸಜ್ಜಾದ ಆರೋಗ್ಯ ಇಲಾಖೆ
- ಜ್ವರ ಪತ್ತೆಗೆ ಸಿದ್ಧತೆ ಮಾಡಿಕೊಂಡ ವೈದ್ಯರು
ರಾಜ್ಯದ ವಿವಿಧೆಡೆ ಆತಂಕ ಸೃಷ್ಟಿಸಿರುವ ಎಚ್1ಎನ್1 (h1n1) ಪ್ರಕರಣಗಳು ಜಿಲ್ಲೆಯಲ್ಲಿ ಶತಕದ (century) ಸನಿಹದಲ್ಲಿದೆ. ಈ ವರ್ಷ ಜಿಲ್ಲೆಯಲ್ಲಿ 1,280 ಮಾದರಿಗಳನ್ನು ವಿಆರ್‌ಡಿಎಲ್‌ನಲ್ಲಿ (vrdl) ಪರೀಕ್ಷೆ ನಡೆಸಿದ್ದು ಇದರಲ್ಲಿ 91 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಗಳ ಪೈಕಿ ಶಿವಮೊಗ್ಗ 5ನೇ ಸ್ಥಾನದಲ್ಲಿದೆ. ಎಚ್1ಎನ್1ನಿಂದ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿ.
ಪ್ರತಿವರ್ಷ ಈ ವಾತಾವರಣದಲ್ಲಿ ಜ್ವರ, ಶೀತ, ಕೆಮ್ಮಿನ ಪ್ರಕರಣಗಳು ಸಹಜವಾಗಿಯೇ ಏರಿಕೆಯಾಗುತ್ತವೆ. ಹೀಗಾಗಿ ಈ ತಿಂಗಳ ಆರಂಭದಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಶೀತ, ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ(ಐಎಲ್‌ಐ), ತೀವ್ರ ಉಸಿರಾಟದ ಸಮಸ್ಯೆ(ಸಾರಿ) ಪ್ರಕರಣಗಳನ್ನು ಆರೋಗ್ಯ ಇಲಾಖೆಯಿಂದ ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಈ ಹಿಂದೆ ಕರೊನಾ ಸಂದರ್ಭ ಸರ್ಕಾರಿ ವಲಯದ ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಿರುವುದರಿಂದ ಎಚ್1ಎನ್1 ಚಿಕಿತ್ಸೆಗೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಎಚ್1ಎನ್1 ಪ್ರಕರಣಗಳು ಯಾವುದೇ ಸೀಮಿತ ಪ್ರದೇಶಕ್ಕೆ ಅನ್ವಯವಾಗಿಲ್ಲ. ಜಿಲ್ಲೆಯ ಎಲ್ಲ ಭಾಗದಲ್ಲೂ ಪತ್ತೆಯಾಗಿವೆ. ಅಧಿಕಾರಿಗಳ ಪ್ರಕಾರ ಮೆಗ್ಗಾನ್ ಆಸ್ಪತ್ರೆಗೆ ನೆರೆಯ ಜಿಲ್ಲೆಗಳಿಂದಲೂ ರೋಗಿಗಳು ಬರುವುದರಿಂದ ಅವರಲ್ಲಿ ಎಚ್1ಎನ್1 ದೃಢಪಟ್ಟರೆ ಅದು ಶಿವಮೊಗ್ಗ ಜಿಲ್ಲೆಯ ವರದಿಗೆ ಸೇರ್ಪಡೆಯಾಗುತ್ತದೆ. ಹೀಗಾಗಿ ಅಂಕಿಅಂಶದಲ್ಲಿ ಸ್ವಲ್ಪ ಏರಿಕೆಯಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಜನರು ಆತಂಕಪಡುವ ಅಗತ್ಯವಿಲ್ಲ.
ಜಿಲ್ಲೆಯ ಯಾವ ಭಾಗದಲ್ಲಿ ಎಚ್1ಎನ್1 ವೈರಸ್ ಪ್ರಮಾಣ ಹೆಚ್ಚಿದೆ ಎಂದು ಹೇಳುವುದು ಕಷ್ಟ. ವೈರಸ್‌ಗೆ ತುತ್ತಾದವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಿದಾಗ ಹರಡುವ ಪ್ರಮಾಣ ಹೆಚ್ಚು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ನಿರ್ಲಕ್ಷಿಸಿದರೆ ಅಪಾಯ ನಿಶ್ಚಿತ
ಎಚ್1ಎನ್1 ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಸರಿಯಾದ ಮಾಹಿತಿ ಇಲ್ಲದೆ ಸಾಕಷ್ಟು ಜನ ಆತಂಕದಲ್ಲಿದ್ದಾರೆ. ಶೀತ, ಜ್ವರದಿಂದ ಬಳಲುವವರು ನಿರ್ಲಕ್ಷ್ಯ ತೋರದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಸಾಮಾನ್ಯ ಜ್ವರದಂತೆ ಆರಂಭವಾಗಿ ಕೆಮ್ಮು, ಶೀತ, ಮೂಗು ಸೋರುವುದು, ಗಂಟಲು ನೋವು, ತಲೆ ನೋವು, ಮೈಕೈ ನೋವು, ವಾಕರಿಕೆ, ವಾಂತಿ-ಭೇದಿ ಲಕ್ಷಣಗಳು ಎಚ್1ಎನ್1ನಲ್ಲಿ ಕಂಡುಬರುತ್ತವೆ. ರೋಗಪೀಡಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಆತನ ಮೂಗಿನಿಂದ ಹಾಗೂ ಬಾಯಿಯಿಂದ ಹೊರಹೊಮ್ಮುವ ದ್ರವದಲ್ಲಿ ಎಚ್1ಎನ್1 ವೈರಾಣು ವಾತಾವರಣ ಸೇರಿ ತಕ್ಷಣ ಮತ್ತೊಬ್ಬ ವ್ಯಕ್ತಿಯ ದೇಹ ಪ್ರವೇಶಿಸುತ್ತದೆ.
*ರೋಗಪೀಡಿತ ವ್ಯಕ್ತಿಯು ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಬೇಕು.
*ನಂತರ ಈ ಟಿಶ್ಯೂ ಪೇಪರನ್ನು ಸುಟ್ಟು ಹಾಕಬೇಕು
*ರೋಗ ಹರಡುವಿಕೆ ತೀವ್ರವಾಗುತ್ತಿರುವ ಪ್ರದೇಶದಲ್ಲಿ ಮೂಗು ಮತ್ತು ಬಾಯಿಗೆ ಮಾಸ್ಕ್ ಉಪಯೋಗಿಸಬೇಕು
*ಶಂಕಿತ ರೋಗಿಗಳ ವಸ್ತು ಹಾಗೂ ಪದಾರ್ಥಗಳನ್ನು ಉಪಯೋಗಿಸುವ ಮೊದಲು ಬಿಸಿ ನೀರಿನಲ್ಲಿ ತೊಳೆಯಬೇಕು
*ಎಚ್1ಎನ್1 ಸೋಂಕು ತಗುಲಿದ್ದರೆ ಕನಿಷ್ಠ 7 ದಿನಗಳವರೆಗೆ ಮನೆಯಿಂದ ಹೊರಬಾರದು
*ಕರೊನಾ ಸೋಂಕಿತರು ಅನುಸರಿಸಿದ ಎಲ್ಲ ಅಂಶಗಳನ್ನು ಎಚ್1ಎನ್1 ಸೋಂಕಿತರೂ ಅನುಸರಿಸುವುದು ಅವಶ್ಯ
*ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವಯೋವೃದ್ಧರು ಯಾವ ಕಾರಣಕ್ಕೂ ಜ್ವರವನ್ನು ನಿರ್ಲಕ್ಷಿಸಬಾರದು
ಅಗತ್ಯಕ್ಕೆ ತಕ್ಕಂತೆ ವೆಂಟಿಲೇಟರ್ ವ್ಯವಸ್ಥೆ
ಎಚ್1ಎನ್1 ಸೋಂಕಿತರಿಗೆ ಚಿಕಿತ್ಸೆ ನೀಡಲು ಮೆಗ್ಗಾನ್ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಮೀಸಲಿರಿಸಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ ಇನ್‌ಫ್ಲುಯೆಂಜಾ ವಾರ್ಡ್ ತೆರೆಯಲಾಗಿದೆ. ಅಗತ್ಯಕ್ಕೆ ತಕ್ಕಂತೆ ವೆಂಟಿಲೇಟರ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಎಫ್‌ಡಿ ಹರಡುವ ಅವಧಿ ಮುಕ್ತಾಯ ಆಗುತ್ತಿದ್ದಂತೆಯೇ ಆರೋಗ್ಯ ಇಲಾಖೆ ಎಚ್1ಎನ್1 ಮೇಲೆ ಹೆಚ್ಚಿನ ನಿಗಾವಹಿಸಿದೆ. ಮೆಗ್ಗಾನ್‌ನಲ್ಲಿರುವ ವಿಆರ್‌ಡಿಎಲ್ ಪ್ರಯೋಗಾಲಯದಲ್ಲಿ ಶಂಕಿತ ಮಾದರಿಗಳ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಕೇಂದ್ರಗಳಿಂದ ಬರುವ ಮಾದರಿಗಳನ್ನು ಇಲ್ಲಿ ಪರೀಕ್ಷಿಸಿ ಒಂದೇ ದಿನದಲ್ಲಿ ವರದಿ ನೀಡಲಾಗುತ್ತಿದೆ. ವಿಆರ್‌ಡಿಎಲ್‌ಗೆ ಶಿವಮೊಗ್ಗ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಂದಲೂ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗುತ್ತಿದೆ.
ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಐಸೋಲೇಷನ್ ಘಟಕ ತೆರೆಯಲಾಗಿದೆ. ಎಚ್1ಎನ್1 ಸೇರಿ ಎಲ್ಲ ಸಾಂಕ್ರಾಮಿಕ ಜ್ವರಗಳಿಗೆ ಅಗತ್ಯ ಮಾತ್ರೆಗಳ ದಾಸ್ತಾನು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಶಂಕಿತ ಜ್ವರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಒತ್ತು ನೀಡಲಾಗುತ್ತಿದೆ.
— ಡಾ. ನಾಗರಾಜ ನಾಯ್ಕ ಜಿಲ್ಲಾ ಸರ್ವೇಕ್ಷಣಾಧಿಕಾರಿ