ಆತ್ಮಹತ್ಯೆ ಮಾಡಿಕೊಂಡ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಮತ್ತು ಅವರ ಪುತ್ರ ಆಕಾಶ್.
ಶಿವಮೊಗ್ಗ: ನಗರದ ಖಾಸಗಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ(Gynecologist) ಮತ್ತು ಅವರ ಪುತ್ರ ಅಶ್ವಥನಗರದ ಮನೆಯಲ್ಲಿ ಡೆತ್‌ನೋಟ್(Deathnote) ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಮ್ಮರಡಿ(Hommaradi) ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್ (34) ಮೃತರು. ಆಶ್ವಥ್ ನಗರದ ಐದನೇ ತಿರುವಿನ ಮನೆಯ ಕೆಳಭಾಗದಲ್ಲಿ ಡಾ. ಜಯಶ್ರೀ ಮತ್ತು ಮೊದಲ ಮಹಡಿಯಲ್ಲಿ ಆಕಾಶ್ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಡೆತ್‌ನೋಟ್‌ನಲ್ಲಿ ಏನಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಜಯಶ್ರೀ ಅವರ ಪತಿ ಮೂಲತಃ ದಾವಣಗೆರೆ(Davanagere) ಜಿಲ್ಲೆ ನ್ಯಾಮತಿ ಮೂಲದ ಡಾ. ನಾಗರಾಜ್ ಹೊಮ್ಮರಡಿ ಕೂಡ 10 ವರ್ಷದ ಹಿಂದೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಅಕಾಶ್ ಅವರ ಮೊದಲ ಪತ್ನಿ ನವ್ಯಶ್ರೀ ಇದೇ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದರು.
ಆನಂತರ ಐದು ತಿಂಗಳ ಹಿಂದೆ ಆಕಾಶ್ ಚಿತ್ರದುರ್ಗದ ಯುವತಿಯನ್ನು ಎರಡನೇ ಮದುವೆಯಾಗಿದ್ದರು. ಅತ್ತೆ ಡಾ. ಜಯಶ್ರೀ, ಪುತ್ರ ಆಕಾಶ್ ಮತ್ತು ಸೊಸೆ ಮೂವರು ಪ್ರತ್ಯೇಕ ಕೊಠಡಿಗಳಲ್ಲಿ ಇರುತ್ತಿದ್ದರು ಎನ್ನಲಾಗಿದೆ. ಪತಿ ಆಕಾಶ್ ಬೆಳಗ್ಗೆ ಬಾಗಿಲು ತೆರೆದಿರಲಿಲ್ಲ. ಆನಂತರ ಪತಿಯ ಸಹೋದರಿಗೆ ಆಕಾಶ್ ಪತ್ನಿ ಕರೆ ಮಾಡಿ ಮಾಹಿತಿ ನೀಡಿದ್ದು, ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹ(Deadbody)ಗಳನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು.