ಆರ್‌ಎಸ್‌ಎಸ್ ಜಿಲ್ಲಾ ಕಾರ್ಯಾಲಯ ಮಧುಕೃಪಾದಲ್ಲಿ ಏರ್ಪಡಿಸಿದ್ದ ವೈಚಾರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಸುಧಾಕರ ಹೊಸಳ್ಳಿ, ಬಿ.ಎ.ರಂಗನಾಥ, ಬಿ.ಜಿ.ಕೃಷ್ಣಮೂರ್ತಿ ಭಾಗವಹಿಸಿದ್ದರು. 
ಶಿವಮೊಗ್ಗ

ಹಿಂದುತ್ವ-ಅಂಬೇಡ್ಕರ್ ನಡುವೆ ಕರುಳಬಳ್ಳಿ ಸಂಬಂಧ I hindutva ambedkar

ಪ್ರಮುಖ ಮುಖ್ಯಾಂಶಗಳು

  • ಡಾ.ಸುಧಾಕರ್ ಹೊಸಳ್ಳಿ ಪ್ರತಿಪಾದನೆ
  • ಆರ್‌ಎಸ್‌ಎಸ್ ಕಾರ್ಯಾಲಯದಲ್ಲಿ ಉಪನ್ಯಾಸ
ಶಿವಮೊಗ್ಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ (ambedkar) ಅವರನ್ನು ಉದ್ದೇಶಪೂರ್ವಕವಾಗಿ ಪರದೆ ಹಿಂದೆ ನಿಲ್ಲಿಸುವ, ಗುರಾಣಿಯಂತೆ ಬಳಸಿಕೊಳ್ಳುವ, ಅಂಬೇಡ್ಕರ್ ಹಿಂದುತ್ವ (hindutva) ಹಾಗೂ ಆರ್‌ಎಸ್‌ಎಸ್‌ (rss) ವಿರೋಧಿ ಎಂಬಂತೆ ಬಿಂಬಿಸುವ ಸಂಘಟಿತ ಪ್ರಯತ್ನ ಆರಂಭದಿಂದಲೂ ನಡೆದಿತ್ತು. ಈಗಲೂ ಅದು ಮುಂದುವರಿದಿದೆ ಎಂದು ಸಂವಿಧಾನ ತಜ್ಞ ಡಾ. ಸುಧಾಕರ್ ಹೊಸಳ್ಳಿ ಗಂಭೀರವಾಗಿ ಆರೋಪಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯಾಲಯ ಮಧುಕೃಪಾದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವೈಚಾರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಡಪಂಥೀಯರು ಹಾಗೂ ಕಮ್ಯುನಿಸ್ಟರು ಅಂಬೇಡ್ಕರ್ ಅವರ ಬಗ್ಗೆ ತಪ್ಪು ಕಲ್ಪನೆಯನ್ನು ಸಮಾಜದಲ್ಲಿ ಬಿತ್ತುವ ಕೆಲಸ ಮಾಡಿದರು ಎಂದು ದೂರಿದರು.
ಆರ್‌ಎಸ್‌ಎಸ್‌ಗೂ ಅಂಬೇಡ್ಕರ್‌ಗೂ ಏನು ಸಂಬಂಧ ಎಂದು ಪ್ರಶ್ನಿಸುವ ಮಂದಿ ಈಗಲೂ ಇದ್ದಾರೆ. ಆರ್‌ಎಸ್‌ಎಸ್ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ, ಉಪನ್ಯಾಸ ಏರ್ಪಡಿಸಿದರೆ ಅದಕ್ಕೆ ಆಕ್ರೋಶ ವ್ಯಕ್ತಪಡಿಸುವ, ಗಲಾಟೆ ಮಾಡುವ ಜನರಿದ್ದಾರೆ. ತನ್ನ ಪ್ರಚಾರಕ್ಕೆ ಅಂಬೇಡ್ಕರ್ ಅವರನ್ನು ಬಳಸಿಕೊಳ್ಳುವ ಅನಿವಾರ್ಯತೆ ಆರ್‌ಎಸ್‌ಎಸ್‌ಗೆ ಎಂದೂ ಬಂದಿಲ್ಲ ಎಂದು ತಿರುಗೇಟು ನೀಡಿದರು.
ಅಂಬೇಡ್ಕರ್ ಅವರನ್ನು ಆರ್‌ಎಸ್‌ಎಸ್ ತನ್ನತ್ತ ಸೆಳೆಯುತ್ತಿದೆ. ಆದರೆ ಅಂಬೇಡ್ಕರ್ ಹಿಂದುತ್ವದ ವಿರೋಧಿಯಾಗಿದ್ದರು ಎಂದು ಅಂಬೇಡ್ಕರ್ ಅವರ ಮೂಲ ವಿಚಾರಧಾರೆಗಳನ್ನೇ ತಿರುಚಲಾಯಿತು. ಆದರೆ ಆರ್‌ಎಸ್‌ಎಸ್-ಅಂಬೇಡ್ಕರ್ ಹಾಗೂ ಹಿಂದುತ್ವ-ಅಂಬೇಡ್ಕರ್ ನಡುವೆ ಇದ್ದದ್ದು ಕರುಳಬಳ್ಳಿಯ ಸಂಬಂಧ ಎಂದು ಅಭಿಪ್ರಾಯಪಟ್ಟರು.
ವಿಕಾಸ ಟ್ರಸ್ಟ್ ಅಧ್ಯಕ್ಷ ಬಿ.ಎ.ರಂಗನಾಥ ಅಧ್ಯಕ್ಷತೆ ವಹಿಸಿದ್ದರು. ವಕೀಲ ಬಿ.ಜಿ.ಶಿವಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅಖಂಡ ಭಾರತ ಬಯಸಿದ್ದರು

ವೀರ ಸಾವರ್ಕರ್, ನೇತಾಜಿ ಸುಭಾಷ್‌ಚಂದ್ರ ಬೋಸರ ಅನೇಕ ವಿಚಾರಗಳನ್ನು ಸಂವಿಧಾನಕ್ಕೆ ಸೇರಿಸುವ ಪರೋಕ್ಷ ಪ್ರಯತ್ನವನ್ನು ಅಂಬೇಡ್ಕರ್ ಮಾಡಿದ್ದರು. ದೇಶ ವಿಭಜನೆ ಬಳಿಕ ಪಾಕಿಸ್ತಾನದ ಅಧ್ಯಕ್ಷ ಮಹಮದ್ ಅಲಿ ಜಿನ್ನಾ ಭಾರತದ ಕುರಿತು ಲಘುವಾಗಿ ಮಾತನಾಡಿದ್ದಕ್ಕೆ ಅಂಬೇಡ್ಕರ್ ಕಟುವಾದ ಶಬ್ದಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರು ಅಖಂಡ ಭಾರತವನ್ನು ಬಯಸಿದ್ದರು. ಒಮ್ಮೆ ವಿಭಜನೆಯಾದ ಭಾರತ ಮತ್ತೆಂದೂ ಹೋಳಾಗಬಾರದು ಎಂಬ ಎಚ್ಚರದಿಂದ ಸಂವಿಧಾನ ರೂಪಿಸಿದ್ದರು ಎಂದು ಡಾ. ಸುಧಾಕರ ಹೊಸಳ್ಳಿ ತಿಳಿಸಿದರು. ಕಾಲದಿಂದ ಕಾಲಕ್ಕೆ ಹಿಂದೂ ಧರ್ಮಕ್ಕೆ ತನ್ನನ್ನು ಪರಿಶೋಧಿಸಿಕೊಳ್ಳುವ, ಅಗತ್ಯ ಮಾರ್ಪಾಡು ಮಾಡಿಕೊಳ್ಳುವ, ಅಗತ್ಯವಿರುವುದನ್ನು ಸ್ವೀಕರಿಸುವ ಶಕ್ತಿಯಿದೆ. ಈ ಸಂಗತಿಯನ್ನು ಅಂಬೇಡ್ಕರ್ ಕೂಡ ಒಪ್ಪಿಕೊಂಡಿದ್ದರು ಎಂದರು.