ಸೊರಬದ ಮುರುಘಾ ಮಠದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿದರು. ರೇಖಾ ಜಗದೀಶ್, ರೇಣುಕಮ್ಮ ಗೌಳಿ ಇತರರಿದ್ದರು.
ಸೊರಬ: ಪ್ರತಿಯೊಬ್ಬರೂ ಜೀವಿತಾವಧಿಯಲ್ಲಿ ಗುರುವಿನ ಮಾರ್ಗದರ್ಶನದೊಂದಿಗೆ ಸತ್ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಕೆಂಪಿನ ಕುಮಾರ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣ ಮುರುಘಾಮಠದಲ್ಲಿ ನಿಜಕಾರ ಹುಣಿಮೆ ಅಂಗವಾಗಿ ಏರ್ಪಡಿಸಿದ್ದ 243ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಿತ್ಯ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಂಡು ಮನಸ್ಸು ವಿಕಾಸಗೊಳಿಸಿಕೊಂಡಾಗ ಮಾತ್ರ ಅಧ್ಯಾತ್ಮ ಚಿಂತನೆಗಳಿಗೆ ಅರ್ಥ ಬರಲಿದೆ. ಸಮಾಜಕ್ಕೆ ಮಾನವೀಯ ಮೌಲ್ಯಗಳ ವಿಚಾರಗಳನ್ನು ತಿಳಿಸುವುದೇ ಶಿವಾನುಭವದ ಉದ್ದೇಶ ಎಂದು ತಿಳಿಸಿದರು.
ಜೀವನದಲ್ಲಿ ಸಾಧನಗೆ ಗುರುವಿನ ಪ್ರೇರಣೆ ಅಗತ್ಯ. ಅಧ್ಯಾತ್ಮದ ಚಿಂತನೆ ಬೆಳೆಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ನಿಜಕಾರ ಹುಣ್ಣಿಮೆ ಬಹಳ ಮಹತ್ವ ಪಡೆದುಕೊಂಡಿದ್ದು, ವಟ ಸಾವಿತ್ರಿ ವ್ರತ ಎಂದು ಕರೆಯಲ್ಪಡುವ ಜೇಷ್ಠ ಹುಣಿಮೆ ಅಂಗವಾಗಿ ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಪೂಜೆ ಸಲ್ಲಿಸುತ್ತಾರೆ. ಇದು ನಮ್ಮ ಪರಂಪರೆ ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ರೇಣುಕಮ್ಮ ಗೌಳಿ, ಡಿ.ಶಿವಯೋಗಿ, ಬಸವರಾಜ ಗೌಡ ಇತರರಿದ್ದರು.