ಸಾಗರದ ಶ್ರೀಗಂಧ ಸಂಕೀರ್ಣದಲ್ಲಿ ಗುರು-ಶಿಷ್ಯ ಪರಂಪರೆಯಲ್ಲಿ ಶಿಬಿರಾರ್ಥಿಗಳಿಂದ ಕಲಿಕೆ ಹಾಗೂ ತಯಾರಿಸಿದ ಕಲಾಕೃತಿಗಳ ಪ್ರದರ್ಶನ. 
ಶಿವಮೊಗ್ಗ

ಗುರು-ಶಿಷ್ಯ ಪರಂಪರೆ ಸಂಜೀವಿನಿ

ಜಿ. ಗಜೇಂದ್ರ
ದೀಪಕ್ ಸಾಗರ್ ಸಾಗರ
ಮಲೆನಾಡಿನ ಕುಶಲಕರ್ಮಿಗಳು ತಮ್ಮ ಸೂಕ್ಷ್ಮ ಪ್ರಸೂತಿ ಕಲೆಗಳಿಂದಲೇ ಹೆಸರಾದವರು. ಶ್ರೀಗಂಧ ಒಂದೇ ಅಲ್ಲದೆ ಬೇರೆ ಮರಗಳಿಂದಲೂ ತಮ್ಮ ಕಲಾನೈಪುಣ್ಯ ಪರಿಚಯಿಸಿದವರು.  ಶ್ರೀಗಂಧದ ಸಂಕೀರ್ಣ ಶ್ರೀಗಂಧವಿಲ್ಲದೆ ನಿಧಾನವಾಗಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಕಲೆಯಿಂದಲೇ ಹೆಸರಾದ ಕುಶಲಕರ್ಮಿಗಳ ಕುಟುಂಬಗಳು ಕುಲಕಸುಬನ್ನು ಬಿಟ್ಟು ಬೇರೆಬೇರೆ ಕೆಲಸಗಳ ಕಡೆ ತಮ್ಮ ಗಮನಹರಿಸುತ್ತಿದ್ದಾರೆ. ಈ ಕಲೆಯನ್ನು ಆರಂಭದಿಂದಲೂ ಗಟ್ಟಿಯಾಗಿ ಹಿಡಿದು ಮುನ್ನಡೆಸಿದವರು ಮಲೆನಾಡಿನ ಗುಡಿಗಾರರು.
ದೇಶದ ರಾಷ್ಟ್ರಪತಿ, ಪ್ರಧಾನಿಗಳು, ಗಣ್ಯಾತಿಗಣ್ಯರಿಗೆ ಇವರು ಕೊಡುಗೆಯಾಗಿ ನೀಡಿದ ಕಲಾಕೃತಿಗಳು ಬೆರಗು ಹುಟ್ಟಿಸಿದ್ದಂತೂ ಸತ್ಯ. ಪ್ರಪಂಚದ ಪ್ರಸಿದ್ಧ ಮ್ಯೂಸಿಯಂಗಳಲ್ಲಿ ಇವರು ನೀಡಿದ ಕೊಡುಗೆ ಇಂದಿಗೂ ಇವೆ.
1970ರ ದಶಕದಲ್ಲಿ ಸಾಗರದಲ್ಲಿ ಕುಶಲಕರ್ಮಿಗಳಿಗಾಗಿ ಸಂಕೀರ್ಣವೊಂದನ್ನು ಸೊರಬಕ್ಕೆ ಹೋಗುವ ದಾರಿಯಲ್ಲಿ ಸ್ಥಾಪಿಸಲಾಯಿತು. ಕೆತ್ತನೆ ಕೆಲಸ ಮಾಡುವವರೆಲ್ಲ ಒಂದೇ ಸೂರಿನಡಿ ಬದುಕು ಕಟ್ಟಿಕೊಂಡು ತಮ್ಮ ಕಾಯಕ ನಡೆಸುವ ಈ ಯೋಜನೆಯನ್ನು ಕಂಡೇ ಅಚ್ಚರಿಗೆ ಒಳಗಾದರು. ಮೈಸೂರು, ಚನ್ನಪಟ್ಟಣ, ಸೊರಬ, ಕುಮಟಾ, ಮುಂಡಗೋಡು, ಶಿರಸಿ ಮುಂತಾದೆಡೆ ಈ ರೀತಿಯ ಗುಂಪು ಕಾಯಕ ನಡೆಸಿ, ಅಲ್ಲಿಯೇ ಜೀವನ ನಡೆಸುವ ಹೊಸ ಅವಕಾಶ ನೀಡಲಾಯಿತು. ಮೈಸೂರು ಅರಸರೂ ಕೂಡ ಇಲ್ಲಿಯ ಕುಶಲಕರ್ಮಿಗಳ ಕಲೆಯನ್ನು ಗಮನಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರು.
ಅಂದಿನಿಂದ ಇಂದಿನವರೆಗೂ ಅತ್ಯಂತ ಎತ್ತರದ ಮರಗಳಲ್ಲಿ ದೊಡ್ಡ ಕಲಾಕೃತಿಗಳನ್ನು ನಿರ್ಮಿಸಿದ ಹಿರಿಮೆ ಸಾಗರದ ಕುಶಲಕರ್ಮಿಗಳು ಮತ್ತು ಗುಡಿಗಾರರಿಗೆ ಸಲ್ಲುತ್ತದೆ. ಸಾಗರದ 17 ಅಡಿ ಎತ್ತರದ ತಾಯಿ ಮಾರಿಕಾಂಬೆಯ ಮೂರ್ತಿಯನ್ನು ಒಂದೇ ಹಲಸಿನ ಮರದಲ್ಲಿ ಕೆತ್ತಿದ ಕೀರ್ತಿ ನಮ್ಮ ಗುಡಿಗಾರರದು.