ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಅಧ್ಯಕ್ಷ ಪಿ.ರಘುಕುಮಾರ್ ಮಾತನಾಡಿದರು. ಪಿ.ಸುಬ್ರಹ್ಮಣಿ, ಎಂ.ಲೋಕೇಶ್, ಸಿ.ರವಿ, ಎಂ.ರಾಜು ಸುದ್ದಿಗೋಷ್ಠಿಯಲ್ಲಿದ್ದರು.
- ತಮಿಳುನಾಡಿನ ಪಳನಿ ಮಾದರಿಯಲ್ಲಿ ಜಾತ್ರೆ
- ವಿವಿಧ ರಾಜ್ಯ, ಜಿಲ್ಲೆ, ತಾಲೂಕುಗಳ ಭಕ್ತರ ಹರಕೆ
- ದೇವಸ್ಥಾನದ ಅಧ್ಯಕ್ಷ ಪಿ.ರಘುಕುಮಾರ್ ಹೇಳಿಕೆ
ಶಿವಮೊಗ್ಗ: ತಮಿಳುನಾಡಿನ ಪಳನಿಯಲ್ಲಿ ನಡೆಯುವ ಜಾತ್ರೆ ಮಾದರಿಯಲ್ಲಿ ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ(Balasubrahmanyaswamy Temple
)ದಲ್ಲಿ ಆ.6ರಂದು ಭರಣಿ ಹಾಗೂ 7ರಂದು ಆಡಿಕೃತ್ತಿಕೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ದೇವಸ್ಥಾನದ ಅಧ್ಯಕ್ಷ ಪಿ.ರಘುಕುಮಾರ್ ಹೇಳಿದರು.
ಆಡಿಕೃತ್ತಿಕೆ ಹರೋಹರ ಜಾತ್ರೆ(Adikruttike Harohara jatre)ಯನ್ನು ಹಲವು ದಶಕಗಳಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಆಷಾಢ ಮಾಸದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತ್ರೆಗೆ ವಿವಿಧ ರಾಜ್ಯ, ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಂದ ಭಕ್ತರು ಹರಕೆ ತೀರಿಸಲು ಕಾವಡಿ ಹೊತ್ತು, ವೇಲ್‌ಗಳನ್ನು ಚುಚ್ಚಿಕೊಂಡು ಆಗಮಿಸಿ ದೇವರ ದರ್ಶನ ಪಡೆಯುವರು. ಮೂರು ದಿನ ಜಾತ್ರೆಯಲ್ಲಿ ಅನ್ನಪ್ರಸಾದ ಇರಲಿದೆ. ಅಂಗಡಿಗಳು, ಅಮ್ಯೂಸ್‌ಮೆಂಟ್ ಪಾರ್ಕ್(Amusement park) ಸ್ಥಾಪಿಸಲಾಗುತ್ತದೆ. ಮುಂದೆ ಆಗಮಶಾಸ್ತ್ರ, ವೇದ ಶಾಸ್ತ್ರ ಪಾಠ ಶಾಲೆ ಸ್ಥಾಪಿಸುವ ಉದ್ದೇಶವಿದೆ. ದೇವಸ್ಥಾನದಲ್ಲಿ ತಿಂಗಳು ಪೂರ್ತಿ ಪ್ರಸಾದ ವಿತರಿಸುವ ಯೋಜನೆ ಇದೆ. ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳುವ ಆಲೋಚನೆ ಇದೆ ಎಂದರು.
ವಿಶ್ವದಲ್ಲೇ ಅತಿ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿಯ ಪ್ರತಿಮೆ ನಿರ್ಮಾಣಕ್ಕೆ ಕಾಂಕ್ರೀಟ್ ಬೆಡ್(Concrete bed)ನಿರ್ಮಿಸಲಾಗಿದೆ. ಮೂರ್ತಿ ನಿರ್ಮಾಣಕ್ಕೆ ಸುಮಾರು 6 ಕೋಟಿ ರೂ. ಹಾಗೂ ಸಂಪೂರ್ಣ ಯೋಜನೆಗೆ 25 ಕೋಟಿ ರೂ. ವೆಚ್ಚವಾಗಲಿದೆ. ಜಾತ್ರೆ ಮುಗಿದ ಬಳಿಕ ಮುಂದಿನ ಕಾಮಗಾರಿ ಆಗಬೇಕು. ಸಂಸದ ಬಿ.ವೈ.ರಾಘವೇಂದ್ರ(MP B.Y.Raghavendra) ಅವರು ಈ ಸಂಬಂಧ ಶ್ರಮವಹಿಸುತ್ತಿದ್ದಾರೆ ಎಂದು ಹೇಳಿದರು. ಟ್ರಸ್ಟ್ ಉಪಾಧ್ಯಕ್ಷ ಪಿ.ಸುಬ್ರಹ್ಮಣಿ, ಕಾರ್ಯದರ್ಶಿ ಎಂ.ಲೋಕೇಶ್, ಸಹ ಕಾರ್ಯದರ್ಶಿ ಸಿ.ರವಿ ಸುದ್ದಿಗೋಷ್ಠಿಯಲ್ಲಿದ್ದರು.
ಸುಬ್ರಹ್ಮಣ್ಯ ಸ್ವಾಮಿಯೇ ಸರ್ವ ದೇವರ ಸೇನಾಧಿಪತಿ. ಗುಡ್ಡೇಕಲ್‌ನ ದೇವಸ್ಥಾನಕ್ಕೆ 100 ವರ್ಷ ಇತಿಹಾಸವಿದೆ. ತಮಿಳು ಭಾಷಿಕರು ಮಾತ್ರ ಹೆಚ್ಚು ಬರುತ್ತಿದ್ದರು. ಈಗ ಎಲ್ಲ ಭಾಷೆ, ಧರ್ಮದವರು ಕೂಡ ಇಲ್ಲಿಗೆ ಬರುತ್ತಿದ್ದಾರೆ.
— ಎಂ.ರಾಜು, ದೇವಸ್ಥಾನ ಟ್ರಸ್ಟ್ ಖಜಾಂಚಿ